Breaking News

ಬೆಳಗಾವಿ ಜನತೆಯ ಪ್ರೀತಿ ಬಡ್ಡಿ ಸಮೇತ ತೀರಿಸುವೆ ಪ್ರಧಾನಿ ಮೋದಿ

Spread the love

ಬೆಳಗಾವಿ ಜನತೆಯ ಪ್ರೀತಿ ಬಡ್ಡಿ ಸಮೇತ ತೀರಿಸುವೆ ಪ್ರಧಾನಿ ಮೋದಿ

ಯುವ ಭಾರತ ಸುದ್ದಿ ಬೆಳಗಾವಿ :        ಬೆಳಗಾವಿಯಿಂದ ಇಂದು ಇಡೀ ದೇಶದ ಕೋಟ್ಯಂತರ ರೈತರಿಗೆ 13ನೇ ಕಂತಿನ 16 ಸಾವಿರ ಕೋಟಿ ರೂಪಾಯಿ ಜಮೆಯಾಗಿರುತ್ತದೆ.

ಇಷ್ಟೊಂದು ದೊಡ್ಡ ಮೊತ್ತ ಒಂದು ಕ್ಷಣದಲ್ಲಿ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿರುವುದು ಸೋಜಿಗದ ಸಂಗತಿ. ಯಾವುದೇ ಸೋರಿಕೆಯಿಲ್ಲದೇ ಇಷ್ಟೊಂದು ದೊಡ್ಡ ಮೊತ್ತ ಜಮೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಅಂಗವಾಗಿ ನವಧಾನ್ಯಗಳನ್ನು ಮಡಿಕೆಗೆ ತುಂಬುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಸುಮಾರು 2,240 ಕೋಟಿ ಮೌಲ್ಯದ ರೇಲ್ವೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13 ನೇ ಕಂತಿನ ಸುಮಾರು 16 ಸಾವಿರ ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಿ ಮಾತನಾಡಿದರು.
ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಯಿಂದ ಬೆಳಗಾವಿಯ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂದರು.
ನಮ್ಮ ಸರಕಾರದ “ಸಬ್ ಕಾ ಸಾಥ್ – ಸಬ್ ಕಾ ವಿಕಾಸ್” ಮಂತ್ರಕ್ಕೆ ಸ್ಫೂರ್ತಿಯಾಗಿರುವ ಬಸವಣ್ಣನವರಿಗೆ ನಮಸ್ಕಾರಗಳು..
ಬೆಳಗಾವಿಯ ನನ್ನ ಬಂಧು-ಭಗಿನಿಯರಿಗೆ ನನ್ನ ನಮಸ್ಕಾರಗಳು.. ಎಂದು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾತು ಆರಂಭಿಸಿದರು.
ಬೆಳಗಾವಿಯ ಜನರ ಆಶೀವಾರ್ದವು ನಮಗೆ ಪ್ರೇರಣಾಶಕ್ತಿಯಾಗಿದೆ. ಈ ನೆಲಕ್ಕೆ ಬರುವುದು ಯಾವುದೇ ತೀರ್ಥ ಯಾತ್ರೆಗಿಂತ ಕಡಿಮೆಯಲ್ಲ.
ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಜನ್ಮಭೂಮಿಯಾಗಿದೆ. ಗುಲಾಮಗಿರಿ ವಿರುದ್ಧ ಹೋರಾಟ ಹಾಗೂ ನವಭಾರತ ನಿರ್ಮಾಣದಲ್ಲಿ ಬೆಳಗಾವಿಯ ಪಾತ್ರ ಪ್ರಮುಖವಾಗಿದೆ.

ರಾಜ್ಯದಲ್ಲಿ ಸ್ಟಾರ್ಟ್ ಅಪ್ ಗಳ ಚರ್ಚೆಯಾಗುತ್ತಿದೆ. ಬೆಳಗಾವಿಯಲ್ಲಿ ನೂರು ವರ್ಷಗಳ ಹಿಂದೆಯೇ ಸ್ಟಾರ್ಟ್ ಅಪ್ ಆರಂಭಗೊಂಡಿತ್ತು. ಅಂದು ಬೆಳಗಾವಿಯಲ್ಲಿ ಬಾಬುರಾವ್ ಪುಸಾಳ್ಕರ್ ಸಣ್ಣ ಔದ್ಯೋಗಿಕ ಘಟಕ ಪ್ರಾರಂಭಿಸಿದ್ದರು,ಅದು ಕೈಗಾರಿಕಾ ರಂಗದ ಬೆಳವಣಿಗೆಗೆ ಕಾರಣವಾಗಿದೆ.

 

ದೇಶದ ರೈತರಿಗೆ ಹೋಳಿ ಹಬ್ಬದ ಶುಭಾಶಯಗಳು. ಬದಲಾಗುತ್ತಿರುವ ಇಂದಿನ ಭಾರತ ಒಂದೊಂದು ಹೆಜ್ಜೆ ಅಭಿವೃದ್ಧಿಯತ್ತ ಧಾಪುಗಾಲು ಇಡುತ್ತಿದೆ.

ಸಣ್ಣ ರೈತರನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ ನಮ್ಮ ಸರ್ಕಾರದ ಆದ್ಯತೆ ಸಣ್ಣ ರೈತರಿಗೆ ನೆರವಾಗುವುದಾಗಿದೆ.

ತಲಾ ಎರಡೂವರೆ ಲಕ್ಷ ರೂಪಾಯಿ ಈಗಾಗಲೇ ರೈತರ ಖಾತೆಗೆ ಜಮಾ ಆಗಿದೆ. ಕೃಷಿ ಅಗತ್ಯತೆಗಳಿಗಾಗಿ ಸಾಲಕ್ಕಾಗಿ ರೈತರು ಇತರರ ಬಳಿ ಕೈ ಒಡ್ಡದಂತೆ ಸ್ವಾವಲಂಬಿಯಾಗಿಸಿದೆ.

ಕೃಷಿಯನ್ನು ಆಧುನಿಕತೆಯೊಂದಿಗೆ ಜೋಡಿಸಿ ಭವಿಷ್ಯತ್ತಿನ ಅವಶ್ಯಕತೆ ಪೂರ್ಣಗೊಳಿಸಲಾಗುವುದು.
2014 ರಲ್ಲಿ ಕೃಷಿಗೆ ಮೀಸಲಿಟ್ಟ ಬಜೆಟ್ ಕೇವಲ 25 ಸಾವಿರ ಕೋಟಿ ಇತ್ತು. ಈ ವರ್ಷ ನಮ್ಮ ಸರಕಾರದ ಬಜೆಟ್ ನಲ್ಲಿ 1.25 ಲಕ್ಷ ಕೋಟಿ ಮೀಸಲಿಡಲಾಗಿದೆ.
ನಮ್ಮ ಸರಕಾರವು ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಜತೆ ಜೋಡಿಸುವ ಕೆಲಸ ನಿರಂತರವಾಗಿ ನಡೆಸುತ್ತಿದೆ.

ಸಾವಯವ ಕೃಷಿಗೆ ಒತ್ತ ನೀಡಲಾಗುತ್ತಿದೆ. ಇದಲ್ಲದೇ “ಪಿಎಂ- ಪ್ರಣಾಮ್ ಯೋಜನೆ”ಯಡಿ ರಾಸಾಯನಿಕ ಮುಕ್ತ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಪಾರಂಪರಿಕ ಕೃಷಿ ಪದ್ಧತಿಯನ್ನು ನಾವು ಇಂದು ಅಳವಡಿಸಿಕೊಳ್ಳಬೇಕಿದೆ. ಸಿರಿಧಾನ್ಯ‌ಬೆಳೆಗಳಿಗೆ ಸಿರಿಅನ್ನ ಯೋಜನೆ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ.
ಕರ್ನಾಟಕವು ಸಿರಿಧಾನ್ಯಗಳ ತವರು ಭೂಮಿಯಾಗಿದೆ. ಯಡಿಯೂರಪ್ಪ ನವರು ಸಿರಿಧಾನ್ಯ ಹಾಗೂ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದ್ದರು.

ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಸರಕಾರವು ಈ ಬಜೆಟ್ ನಲ್ಲಿ 2016-17 ಗಿಂತ ಮುಂಚಿನ ಬಾಕಿ ಬಿಲ್ ಗಳ ಮೇಲೆ ತೆರಿಗೆಗಡ ವಿನಾಯಿತಿಯನ್ನು ನೀಡಲಾಗಿದೆ. ಇದರಿಂದ ಕಬ್ಬು ಬೆಳೆಗಾರರ ಸಹಕಾರಿ ಸಂಘಕ್ಕೆ ಸಹಕಾರಿಯಾಗಲಿದೆ.

ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಕ್ಷೇತ್ರದ ಪರಸ್ಪರ ಸಂಪರ್ಕ ದಿಂದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಈ ಕ್ಷೇತ್ರಗಳ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಅನೇಕ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲುಸಂಪರ್ಕ ಯೋಜನೆಗಳಿಂದ ರಾಜ್ಯದ ಪ್ರಗತಿಗೆ ವೇಗ ದೊರಕಲಿದೆ.
ಲೋಂಡಾ-ಘಟಪ್ರಭಾ ಮಾರ್ಗ ಡಬ್ಲಿಂಗ್ ನಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ. ಉತ್ತಮ ರೈಲು ಸಂಪರ್ಕದಿಂದ ಇತರೆ ಕ್ಷೇತ್ರಗಳ
ಡಬಲ್ ಎಂಜಿನ್ ಸರಕಾರವು ” ವೇಗ”ದ ಪ್ರಗತಿಗೆ ಸಾಕ್ಷಿಯಾಗಿದೆ. ಜಲಜೀವನ ಮಿಷನ್ ಯೋಜನೆಯ ಅನುಷ್ಠಾನ ಇದಕ್ಕೆ ಸಾಕ್ಷಿಯಾಗಿದೆ.
ಗ್ರಾಮೀಣ ಪ್ರದೇಶದ ಶೇ.65 ಕ್ಕೂ ಅಧಿಕ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಮೂಲಕ ಮನೆಮನೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ.

ವೇಣುಗ್ರಾಮ ಎಂಬ ಖ್ಯಾತಿಯನ್ನು ಬೆಳಗಾವಿ ಹೊಂದಿದೆ. ನಮ್ಮ ಸರಕಾರವು ಬಿದಿರು ಬೆಳೆ ಹಾಗೂ ಕಟಾವಿಗೆ ಅನುಮತಿ ನೀಡಿರುವುದರಿಂದ ಈ ಭಾಗದ ಕರಕುಶಲ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಬೆಳಗಾವಿಯ ಜನರು ನೀಡಿದ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುವೆ. ಕರ್ನಾಟಕ ಹಾಗೂ ಬೆಳಗಾವಿಯ ಅಭಿವೃದ್ದಿಯೊಂದಿಗೆ ನಿಮ್ಮ ಪ್ರೀತಿಯ ಋಣ ತೀರಿಸುವೆ ಎಂದು ಪ್ರಧಾನಮಂತ್ರಿ ಅವರು ಭರವಸೆ ನೀಡಿದರು.

ಇದಕ್ಕೂ ಮೊದಲು 2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಹಿನ್ನೆಲೆಯಲ್ಲಿ ನವಬಗೆಯ ಸಿರಿಧಾನ್ಯಗಳನ್ನು ಮರದ ಮೂಲಕ ಮಣ್ಣಿನ ಮಡಿಕೆಗೆ ತುಂಬುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದಾದ ಬಳಿಕ ಬಟನ್ ಒತ್ತುವ ಮೂಲಕ ದೇಶದ ಎಂಟು ಕೋಟಿ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 13 ನೇ ಕಂತಿನ ತಲಾ ಎರಡು ಸಾವಿರ ರೂಪಾಯಿಯಂತೆ ಒಟ್ಟಾರೆ 16 ಸಾವಿರ ಕೋಟಿ ರೂಪಾಯಿ ಹಣವನ್ನು ಜಮೆ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಳಗಾವಿಯ ಜನ ಇಂದು ಪ್ರಧಾನಿಯವರಿಗೆ ಅಭೂತಪೂರ್ವ ಸ್ವಾಗತ ನೀಡಿ ಹೊಸ ಇತಿಹಾಸ ಬರೆದಿದ್ದಾರೆ. ಪ್ರಧಾನಿಯವರ ಕೃಷಿ ಕ್ಷೇತ್ರದ ಕಾಳಜಿಯಿಂದ ಪ್ರೇರಣೆ ಪಡೆದು ರಾಜ್ಯದಲ್ಲಿ ರೈತವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ.ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನಿಷ್ಠ ಬೆಂಬಲ ಯೋಜನೆಯಡಿಯ ಕೃಷಿ ಉತ್ಪನ್ನಗಳ ದರಗಳನ್ನು ಪ್ರಧಾನಿಯವರು ಪರಿಷ್ಕರಣ ಮಾಡಿರುವುದು ರೈತರಿಗೆ ನೆರವಾಗಿದೆ.
ಪ್ರಧಾನಿಯವರು ತೆಗೆದುಕೊಳ್ಳುತ್ತಿರುವ ಕ್ರಮಗಳು ದೇಶವನ್ನು ಅನಿಶ್ಚಿತತೆಯಿಂದ ನಿಶ್ಚಿತತೆಯೆಡೆಗೆ ತೆಗೆದುಕೊಂಡು ಹೋಗುತ್ತಿದೆ.ದೇಶದ ಪ್ರತಿ ಮನೆ ಮನೆಗೂ ನೀರು ಕೊಡುವ ಕಾರ್ಯವನ್ನು ಜಲಜೀವನ ಮಿಷನ್ ಮೂಲಕ ನನಸು ಮಾಡಿದ್ದಾರೆ. ಭಾರತವನ್ನು ವಿಶ್ವಮಾನ್ಯವಾಗಿಸಿರುವ ಮೋದಿಯವರ ನವಭಾರತಕ್ಕಾಗಿ ನಾವು ನವಕರ್ನಾಟಕ ನಿರ್ಮಿಸುತ್ತೇವೆ.ಐದು ಟ್ರಿಲಿಯನ್ ಆರ್ಥಿಕತೆಯ ಅವರ ಸಂಕಲ್ಪಕ್ಕೆ ರಾಜ್ಯವೂ ಒಂದು ಟ್ರಿಲಿಯನ್ ಆರ್ಥಿಕತೆಯ ಕೊಡುಗೆ ನೀಡಲಿದೆ ಎಂದರು.

ಕೇಂದ್ರ ಕೃಷಿ ಹಾಗೂ ಕಿಸಾನ್ ಕಲ್ಯಾಣ ಮಂತ್ರಿ ನರೇಂದ್ರಸಿಂಗ್ ತೋಮರ್ ಮಾತನಾಡಿ,ದೇಶದಾದ್ಯಂತ ಇಂದು ಲಕ್ಷಾಂತರ ರೈತರು ಇಂದಿನ ಕಾರ್ಯಕ್ರಮದ ಫಲಾನುಭವಿಗಳಾಗಿದ್ದಾರೆ.ರೈತರ ಆದಾಯ ಹೆಚ್ಚಿಸಲು ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಾಗಿದೆ.ಈ ಬೃಹತ್ ರಾಷ್ಟ್ರದಲ್ಲಿ ಇಂತಹ ರೈತಪರ ಯೋಜನೆ ಅನುಷ್ಠಾನಗೊಳಿಸುವುದು ಸಾಮಾನ್ಯ ಕಾರ್ಯವಲ್ಲ.ಬೆಳಗಾವಿಯ ಈ ನೆಲದಲ್ಲಿ ವಿದ್ಯುನ್ಮಾನ ಗುಂಡಿ ಒತ್ತುವ ಮೂಲಕ ದೇಶದ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 16 ಸಾವಿರ ಕೋಟಿ ರೂ.ನೇರ ವರ್ಗಾವಣೆ ಮಾಡಿದ್ದಾರೆ.ಕೃಷಿ,ತೋಟಗಾರಿಕೆ,ಸಾವಯವ ಸಿರಿಧಾನ್ಯಗಳು,ತಂತ್ರಜ್ಞಾನ ಆಧಾರಿತ ಕೃಷಿ ಕ್ಷೇತ್ರದ ಬೆಳವಣಿಗೆಗೆ ಯೋಜನೆ ಮತ್ತು ನೀತಿಗಳನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿ,ಜಾರಿಗೊಳಿಸಿದ್ದಾರೆ.ರೈತ ಸಮೃದ್ಧವಾಗಿ ಬೆಳೆದರೆ,ದೇಶ ಸಮೃದ್ಧವಾಗಿರಲು ಸಾಧ್ಯ ರೈತನ ಹಿತ ಕಾಪಾಡುವ ಕಾರ್ಯವನ್ನು ಸರ್ಕಾರ ನಿರ್ವಹಿಸುತ್ತಿದೆ.ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯ ಜಾಗೃತಿ ಮೂಡಿಸಲು ಮಾರ್ಚ್ 18 ರಂದು ಪ್ರಧಾನಿಯವರು ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

ಕೇಂದ್ರ ಗಣಿ,ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಜೈ ಜವಾನ್,ಜೈ ಕಿಸಾನ್ ಘೋಷಣೆಯ ಜೊತೆಗೆ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗಾವಿಯಲ್ಲಿಂದು ನಡೆದ ಐತಿಹಾಸಿಕ ರೋಡ್ ಷೋ ನಡೆಸಿರುವುದು ,ರಾಜ್ಯದ ರಾಜಕಾರಣದಲ್ಲಿ ಸಂಚಲನ ಮೂಡಿಸಲಿದೆ ಎಂದರು.

*ಸನ್ಮಾನ*
ಕರಕುಶಲ ನೇಯ್ಗೆಯ ಜಿಐ ಟ್ಯಾಗ್ ಹೊಂದಿದ ಸುಂದರ ಶಾಲು,ಏಲಕ್ಕಿ ಹಾರ,ಪೇಟ,ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ಭಾವಚಿತ್ರ, ಕಸೂತಿಯಲ್ಲಿ ವಿನ್ಯಾಸಗೊಳಿಸಿದ ನರೇಂದ್ರ ಮೋದಿ ಅವರ ಚಿತ್ರಪಟವನ್ನು ನೀಡಿ ಮುಖ್ಯಮಂತ್ರಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ
ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ,ಬಿ.ಸಿ.ಪಾಟೀಲ್,
ಶಶಿಕಲಾ ಜೊಲ್ಲೆ, ಸಂಸದರಾದ ಮಂಗಳಾ ಸುರೇಶ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ,ಈರಣ್ಣ ಕಡಾಡಿ, ಶಾಸಕರಾದ ಮಹೇಶ ಕುಮಠಳ್ಳಿ,ಪಿ.ರಾಜೀವ,ದುರ್ಯೋಧನ ಐಹೊಳೆ,ಬಾಲಚಂದ್ರ ಜಾರಕಿಹೊಳಿ,ರಮೇಶ ಜಾರಕಿಹೊಳಿ,ಅಭಯ್ ಪಾಟೀಲ,ಮಹದೇವಪ್ಪ ಯಾದವಾಡ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ್, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಹನುಮಂತ ನಿರಾಣಿ, ಡಾ.ಸಾಬಣ್ಣ ತಳವಾರ ಸೇರಿದಂತೆ ಇನ್ನಿತರರು ಇದ್ದರು.

ಅದ್ಧೂರಿ ರೋಡ್ ಶೋ..

ಕಾರ್ಯಕ್ರಮಕ್ಕೂ ಮುನ್ನ ಬೆಳಗಾವಿಯಲ್ಲಿ ಸುಮಾರು 10.ಕಿ.ಮೀ ಗಳಿಗೂ ಅಧಿಕ ಮಾರ್ಗದಲ್ಲಿ ಪ್ರಧಾನಮಂತ್ರಿಗಳ ರೋಡ್ ಶೋ ನಡೆಯಿತು.
ನಗರದ ಕೆ.ಎಸ್.ಆರ್.ಪಿ ಮೈದಾನದಿಂದ ಅರಂಭವಾದ ಪ್ರಧಾನಮಂತ್ರಿಗಳ ರೋಡ್ ಶೋ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಕಾಲೇಜು ರಸ್ತೆ ಮಾರ್ಗವಾಗಿ ನಗರದ ಹೊರವಲಯದ ಮಾಲಿನಿಸಿಟಿ ಮೈದಾನದವರೆಗೆ ನಡೆಯಿತು. ದಾರಿಯುದ್ದಕ್ಕೂ ಕುಂದಾನಗರಿಯ ಅಪಾರ ಜನಸ್ತೋಮ ಸಾಗರೋಪಾದಿಯಲ್ಲಿ ನೆರೆದು ಪ್ರಧಾನಮಂತ್ರಿಗಳನ್ನು ಹರ್ಷೋದ್ಘಾರಗಳಿಂದ ಸ್ವಾಗತಿಸಿದರು.
ಪ್ರಮುಖ ವೃತ್ತಗಳಲ್ಲಿ ಪುಷ್ಪಾರ್ಚನೆಗೈದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಜನರು ಜೈಕಾರ ಹಾಕಿದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

1 × four =