Breaking News

ಸಾಹಿತ್ಯ ಸಮ್ಮೇಳನ : ಕರದಂಟು ನಾಡಿಗೆ ಕೂಡಿ ಬಾರದ ಯೋಗ !

Spread the love

ಸಾಹಿತ್ಯ ಸಮ್ಮೇಳನ : ಕರದಂಟು ನಾಡಿಗೆ ಕೂಡಿ ಬಾರದ ಯೋಗ !

ಬೆಟಗೇರಿ ಕೃಷ್ಣಶರ್ಮ, ಬಸವರಾಜ ಕಟ್ಟಿಮನಿ ಅವರಂತಹ ಮೇರು ಸಾಹಿತಿಗಳನ್ನು ಗೋಕಾವಿ, ಕುಂದರನಾಡು ಕನ್ನಡ ನಾಡಿಗೆ ನೀಡಿದೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ಕರದಂಟು ನಾಡಿನಲ್ಲಿ ಇದುವರೆಗೆ ಸಾಹಿತ್ಯ ಸಮ್ಮೇಳನ ನಡೆಸಲು ಆಸಕ್ತಿ ವಹಿಸದೆ ಇರುವುದು ಬೇಸರದ ಸಂಗತಿ.

ಯುವ ಭಾರತ ಸುದ್ದಿ ಬೆಳಗಾವಿ :
ಕನ್ನಡ ಸಾಹಿತ್ಯ ಪರಿಷತ್ತು ಇದುವರೆಗೆ ಒಟ್ಟು 86 ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದೆ. ಆದರೆ, ಇವುಗಳಲ್ಲಿ ಬೆಳಗಾವಿಯಲ್ಲಿ ನಡೆದಿರುವುದು ಕೇವಲ 5 ಸಮ್ಮೇಳನ ಮಾತ್ರ. ಬೆಳಗಾವಿ ನಗರ ಹೊರತುಪಡಿಸಿ
ಜಿಲ್ಲೆಯಲ್ಲಿ ದೊಡ್ಡ ದೊಡ್ಡ ನಗರಗಳಿವೆ. ಆದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರ ಹೊರತುಪಡಿಸಿಯೂ ಇತರ ನಗರಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದ ಉದಾಹರಣೆ ಸಾಕಷ್ಟು ದೊರೆಯುತ್ತದೆ. ಬೆಳಗಾವಿ ಜಿಲ್ಲೆಯ ದೊಡ್ಡ ನಗರಗಳಲ್ಲಿ ಸಮ್ಮೇಳನ ಆಯೋಜಿಸಬಹುದು. ಆದರೆ ಸಾಹಿತ್ಯ ಪರಿಷತ್ತು ಮಾತ್ರ ಈ ಬಗ್ಗೆ ಗಮನ ಹರಿಸದಿರುವುದು ಅಚ್ಚರಿ ಸಂಗತಿ.

ಬೆಳಗಾವಿಯಲ್ಲಿ 1925, 1929, 1939, 1980, 2003 ರಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು. ಈ ಸಮ್ಮೇಳನ ನಡೆದು 20 ವರ್ಷಗಳೇ ಕಳೆದು ಹೋಗಿವೆ.

ಬೆಳಗಾವಿ ಬಹು ವಿಸ್ತಾರದ ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆ. ಪ್ರತಿಯೊಂದು ಕ್ಷೇತ್ರದಲ್ಲೂ ಜಿಲ್ಲೆಗೆ ಅನ್ಯಾಯವಾಗುತ್ತಲೇ ಬಂದಿದೆ. ಇದೀಗ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರದಲ್ಲೂ ಈ ಬಹುದೊಡ್ಡ ಜಿಲ್ಲೆಗೆ ಮತ್ತೆ ಅನ್ಯಾಯವಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಮುಂದಿನ ಸಾಹಿತ್ಯ ಸಮ್ಮೇಳನದ ಸ್ಥಳ ನಿರ್ಧರಿಸಲು ಸಾಹಿತ್ಯ ಪರಿಷತ್ತು ಇಷ್ಟರಲ್ಲೇ ಹಾವೇರಿಯಲ್ಲಿ ಸಭೆ ಸೇರಲಿದೆ. ಬಳ್ಳಾರಿ, ಯಾದಗಿರಿ, ಉತ್ತರ ಕನ್ನಡ, ಮಂಡ್ಯ, ಹಾಸನ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳು ತಮ್ಮ ಜಿಲ್ಲೆಗಳಲ್ಲೇ ಮುಂದಿನ ಬಾರಿ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಹಕ್ಕು ಮಂಡಿಸಿವೆ. ಮಾತ್ರವಲ್ಲ, ಕನ್ನಡ ಜಾತ್ರೆ ನಡೆಸಲು ತಾ ಮುಂದು ತಾ ಮುಂದು ಎಂದು ಪರಿಷತ್ತಿನೊಂದಿಗೆ ಜಗಳ ತೆಗೆದು ನಿಂತಿವೆ.

ಮುಂದಿನ ಸಲವೂ ಬೆಳಗಾವಿ ನಗರವೂ ಸೇರಿ ಜಿಲ್ಲೆಯ ಯಾವೊಂದು ನಗರದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುವ ಯಾವುದೇ ಲಕ್ಷ್ಮಣ ಎನ್ನುವುದು ಜಿಲ್ಲೆಯ ಸಾಹಿತ್ಯ ಪ್ರೇಮಿಗಳಿಗೆ ಸಾಕೇದಾಶ್ಚರ್ಯ ಉಂಟು ಮಾಡಿದೆ. ಯಾಕೆಂದರೆ ಇವೆಲ್ಲ ಚಿಕ್ಕ ಚಿಕ್ಕ ಜಿಲ್ಲೆಗಳು. ಹಿಂದೊಮ್ಮೆ ಜೆ.ಎಚ್.ಪಟೇಲ್ ಅವರು ಜಿಲ್ಲೆಗಳನ್ನು ಒಡೆದಾಗ ಇದರಲ್ಲಿ ಕೆಲ ಜಿಲ್ಲೆಗಳು ಹೊಸದಾಗಿ ಉದಯವಾಗಿದ್ದವು. ಆಗ ಬೆಳಗಾವಿ ಜಿಲ್ಲೆ ಒಡೆದಿದ್ದರೂ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳು ಹುಟ್ಟಿಕೊಳ್ಳುತ್ತಿದ್ದವು‌. ಹೀಗಾಗಿ ಜಿಲ್ಲಾ ಕೇಂದ್ರ ಹೊರತುಪಡಿಸಿ ನಿಪ್ಪಾಣಿ, ಚಿಕ್ಕೋಡಿ, ಗೋಕಾಕ, ಅಥಣಿ, ಬೈಲಹೊಂಗಲ ಮುಂತಾದ ನಗರಗಳಲ್ಲೂ ಸಾಹಿತ್ಯ ಸಮ್ಮೇಳನ ನಡೆಸಬಹುದಾಗಿದೆ. ಆದರೆ, ಸಾಹಿತ್ಯ ಪರಿಷತ್ ಈ ನಿಟ್ಟಿನಲ್ಲಿ ಗಮನ ಹರಿಸದೆ ಇರುವುದು ಸೋಜಿಗ ಎನಿಸಿದೆ.

ಬೆಳಗಾವಿಯಲ್ಲಿ 2003 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿತ್ತು. ಪಾಟೀಲ ಪುಟ್ಟಪ್ಪ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅದಾದ ನಂತರ 2011 ರಲ್ಲಿ ಎರಡನೇ ವಿಶ್ವಕನ್ನಡ ಸಮ್ಮೇಳನಕ್ಕೆ ಬೆಳಗಾವಿ ಆತಿಥ್ಯ ಒದಗಿಸಿತ್ತು. ಇವೆರಡು ಸಮ್ಮೇಳನಗಳು ಅಚ್ಚುಕಟ್ಟಾಗಿ ನಡೆದು ಐತಿಹಾಸಿಕ ದಾಖಲೆ ಬರೆದಿದ್ದವು. ಆದರೆ, ಅನಂತರ ರಾಜ್ಯಮಟ್ಟದ ಯಾವುದೇ ಸಾಹಿತ್ಯ ಸಮ್ಮೇಳನಗಳಿಗೆ ಬೆಳಗಾವಿ ಆತಿಥ್ಯ ಒದಗಿಸಿಲ್ಲ. ಹೀಗಾಗಿ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ನ್ಯಾಯ ಒದಗಿಸಿ ಕೊಡಬೇಕು ಎನ್ನುವುದು ಜಿಲ್ಲೆಯ ಸಾಹಿತ್ಯ ಒತ್ತಾಯವಾಗಿದೆ.

 

2003 ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿದೆ. 2011ರಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆದು 12 ವರ್ಷಗಳ ಗತಿಸಿವೆ. ಕನ್ನಡ ನಾಡಿನ ಗಡಿಯಲ್ಲಿ ಸಾಹಿತ್ಯ- ಸಂಸ್ಕೃತಿಗಳನ್ನು ಉತ್ತೇಜಿಸಿ ಬೆಳೆಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತು ಮತ್ತೆ ಗಡಿ ಭಾಗದಲ್ಲಿ ಸಾಹಿತ್ಯ ಚಟುವಟಿಕೆ ನಡೆಸಲು ಮುಂದಾಗದೆ ಇರುವುದು ಜಿಲ್ಲೆಯ ಸಾಹಿತ್ಯ ಪ್ರೇಮಿಗಳಿಗೆ ಭಾರಿ ನಿರಾಶೆಯನ್ನುಂಟು ಮಾಡಿದೆ. ಬೆಳಗಾವಿ ಹೊರತುಪಡಿಸಿ ಬೈಲಹೊಂಗಲ, ಗೋಕಾಕ, ಚಿಕ್ಕೋಡಿ, ಅಥಣಿ, ನಿಪ್ಪಾಣಿಗಳಲ್ಲಿ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸಬಹುದಾಗಿದೆ. ಆದರೆ, ಪರಿಷತ್ತಿಗೆ ಗಜಗಾತ್ರದ ಬೆಳಗಾವಿ ಜಿಲ್ಲೆ ಮೇಲೆ ಅಷ್ಟೊಂದು ಆಸಕ್ತಿ ಇಲ್ಲ.

ಬೆಳಗಾವಿ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿದರೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಈ ಗಡಿ ಜಿಲ್ಲೆ ಅನುಪಮ ಕೊಡುಗೆ ನೀಡಿದೆ. ಆದರೆ, ಸಾಹಿತ್ಯ ಪರಿಷತ್ತು ಅವುಗಳನ್ನೆಲ್ಲ ಗಮನಿಸಿ ಗಡಿಭಾಗದಲ್ಲಿ ಮೇಲಿಂದ ಮೇಲೆ ಸಾಹಿತ್ಯ ಚಟುವಟಿಕೆ ಹಮ್ಮಿಕೊಂಡು ಗಡಿಯನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಬೇಕಿತ್ತು ಎನ್ನುವುದು ಸಾಹಿತ್ಯ ಅಭಿಪ್ರಾಯವಾಗಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

four × two =