ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಸಂಸತ್ತು ಚುನಾವಣೆ
ಯುವ ಭಾರತ ಸುದ್ದಿ ಇಂಡಿ :
ಪ್ರಜಾಪ್ರಭುತ್ವ ಮೌಲ್ಯ, ಚುನಾವಣೆ ನೈಜತೆ, ಭವಿಷ್ಯದ ಮತಾದಾರ ಪ್ರಭುಗಳಾಗಿರುವ ವಿಧ್ಯಾರ್ಥಿಗಳಿಗೆ ವಿಶೇಷವಾದ ಅನುಭವ ಕೊಡುವ ಪ್ರಯತ್ನ ಮಾಡಿದ್ದು ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವಕೀಲರು ಸಂತೋಷ ಕೆಂಬೋಗಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿ ಮಾತಾನಾಡಿದರು.
ಪಟ್ಟಣದ ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಆಶ್ರಯದಲ್ಲಿ ನಡೆದ ವಿಧ್ಯಾರ್ಥಿಗಳ ಸಂಸತ್ತು ಚುನಾವಣೆ, ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ
ಬ್ಯಾಲೆಟ್ ಪತ್ರದ ಮೂಲಕ ಮತ ಚಲಾಯಿಸಿ ಕಾಲೇಜು ಸಂಸತ್ತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಎಲ್ಲರ ಗಮನ ಸೆಳೆಯಿತು.
ಭಾರತದ ಚುನಾವಣಾ ಆಯೋಗ ನಡೆಸುವ ಸಾರ್ವತ್ರಿಕ ಚುನಾವಣೆಗಳು ಹಾಗೂ ಮತದಾನದ ಎಲ್ಲ ವಿದಿ ವಿಧಾನಗಳನ್ನು ಅನುಸರಿಸುವ ಮೂಲಕ ಕಾಲೇಜು ಸಂಸತ್ತು ರಚನೆ ಮಾಡಿ ಚುನಾವಣೆ ಪ್ರಕ್ರಿಯೆ ಅರಿತುಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಉಪಕರಣಗಳ ಬಳಕೆಯ ಮೂಲಕ ಚುನಾವಣೆಗೆ ಮೆರುಗು ತರಲಾಯಿತು. ನಂತರ ರಿಟರ್ನಿಂಗ್ ಆಫೀಸರ್‌ಗಳ ನೇಮಕ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉಮೇದುವಾರಿಕೆ ಸಲ್ಲಿಸಲು ಅವಕಾಶ ನೀಡಲಾಯಿತು.
ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ಎಲ್ಲ ಹಂತಗಳನ್ನು ಕಾಲೇಜು ಸಂಸತ್ತಿನ ಚುನಾವಣೆಯಲ್ಲಿ ಅನುಸರಿಸಲಾಯಿತು.
ಚುನಾವಣೆಗೆ ಬೇಕಾದ ಸಿಬ್ಬಂದಿ ನೇಮಕ, ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಹೀಗೆ ಪ್ರತಿಯೊಂದು ಪಾತ್ರಗಳನ್ನು ನಿರ್ವಹಿಸಲಾಗಿತ್ತು. ಪ್ಯಾರಾಮೆಡಿಕಲ್ ಕಾಲೇಜು 76 ವಿಧ್ಯಾರ್ಥಿಗಳು ಮತ ಚಲಾಯಿಸಿದರು.
ವಿಠ್ಠಲ ಮಾಳಬಾಗಿ ಜನರಲ್ ಕಾರ್ಯದರ್ಶಿ, ವಿಜಯಲಕ್ಷ್ಮಿ ಮಾದರ ಮಹಿಳಾ ಜನರಲ್ ಕಾರ್ಯದರ್ಶಿಯಾಗಿ, ಪವಿತ್ರ ಬಿಜ್ಜರಗಿ ಕಾರ್ಯದರ್ಶಿ, ರಕ್ಷಿತಾ ಬಡಿಗೇರ ಸಾಂಸ್ಕೃತಿಕ, ರೋಹಿತ ಪವಾರ ಕ್ರೀಡಾ, ಶಂಕರಲಿಂಗ ಸಿಂಗೆ ಪ್ರವಾಸ ಮಂತ್ರಿಗಳಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ & ಪ್ರಾಚಾರ್ಯರಾಗಿರುವ ಸಂತೋಷ ಕುಲಕರ್ಣಿ ಮಾತಾನಾಡಿದ ಅವರು, ಸ್ವಲ್ಪ ದಿನಗಳಲ್ಲಿಯೇ ತಾಲ್ಲೂಕು ಪಂಚಾಯತ, ಜಿಲ್ಲಾ ಪಂಚಾಯತ ಜೊತೆಗೆ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಬರುತ್ತೆ. ಇಂದಿನ ಮತದಾನ ಅನುಭವ ಮತ್ತು ಚುನಾವಣೆ ಪ್ರಕ್ರಿಯೆ ನಿಮ್ಮ ಜೀವನಕ್ಕೆ ತಳಪಾಯವಾಗಿ ನಿಲ್ಲುತ್ತೆ. ನೀವು ಕೂಡಾ ಭವಿಷ್ಯದಲ್ಲಿ ಮತದಾನ ಮಾಡುವ ನಾಗರಿಕರು ಜೊತೆಗೆ ಚುನಾವಣೆ ಅಧಿಕಾರಿಗಳಾಗಿ ಸೇವೆ ಮಾಡಲು ಸಹಕಾರವಾಗುತ್ತೆ ಎಂದು ಹೇಳಿದರು.
ಮುಖ್ಯ ಚುನಾವಣಾ ಅಧಿಕಾರಿ ಶ್ರೀಶೈಲ ಎಮ್ ಹೂಗಾರ, ಪಿಆರ್ ಒ ಶಿಲ್ಪಾ ಕೋಲಾರ, ಎಪಿಆರ್ ಒ ಸೌಮ್ಯ ರೂಗಿ ,ಆಲ್ಮಾಸ್ ಬೇನೂರು ಈ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸಿದರು. ಇನ್ನೂ ವಿಶೇಷ ಚುನಾವಣಾ ಪರಿವೀಕ್ಷಕರಾಗಿ ಪತ್ರಕರ್ತ ಶಂಕರಲಿಂಗ ಜಮಾದಾರ ಆಗಮಿಸಿದರು.