ಬೆಳಗಾವಿ ರಾಮಕೃಷ್ಣ ಮಿಶನ್ ಆಶ್ರಮದ 19 ನೇ ವಾರ್ಷಿಕೋತ್ಸವ ಶುಕ್ರವಾರ ಆರಂಭ
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದ ವಿಶ್ವ ಭಾವೈಕ್ಯ ಮಂದಿರದ 19 ನೇ ವಾರ್ಷಿಕೋತ್ಸವ ಫೆ. 3 ರಿಂದ 5 ರವರೆಗೆ ನಡೆಯಲಿದೆ ಎಂದು ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದರು ಪರಿವ್ರಾಜಕ ಸಂನ್ಯಾಸಿಯಾಗಿ ದೇಶವನ್ನು ಪರ್ಯಟನೆ ಮಾಡುತ್ತ 1892 ರ ಅಕ್ಟೋಬರ್ ತಿಂಗಳಲ್ಲಿ ಬೆಳಗಾವಿಗೆ ಆಗಮಿಸಿದ್ದರು. ಮೊದಲ ಮೂರು ದಿನಗಳ ಕಾಲ ಬೆಳಗಾವಿ ಸದಾಶಿವ ಭಾಟೆ ಎಂಬ ಖ್ಯಾತ ವಕೀಲರ ಮನೆಯಲ್ಲಿ ತಂಗಿದ್ದರು. ನಂತರ ಒಂಬತ್ತು ದಿನಗಳ ಕಾಲ ಕೋಟೆಯಲ್ಲಿ ಹರಿಪಾದ ಮಿತ್ರ ಎಂಬ ಅರಣ್ಯ ಅಧಿಕಾರಿಗಳ ಬಂಗಲೆಯಲ್ಲಿ ತಂಗಿದ್ದರು. ಸ್ವಾಮಿ ವಿವೇಕಾನಂದರು ಪಾವನಗೊಳಿಸಿದ ಈ ಭೂಮಿಯಲ್ಲಿ ರಾಮಕೃಷ್ಣ ಮಿಶನ್ ಆಶ್ರಮ 2000 ನೇ ಇಸವಿಯಲ್ಲಿ ಪ್ರಾರಂಭವಾಯಿತು. 2004 ರ ಜನವರಿಯಲ್ಲಿ ಭಗವಾನ್ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರವನ್ನು ಸ್ಥಾಪಿಸಿ ಉದ್ಘಾಟಿಸಲಾಯಿತು. ಈ ಸವಿನೆನಪಿಗಾಗಿ ಈಗ 19 ನೆಯ ವಾರ್ಷಿಕೋತ್ಸವವನ್ನು ಫೆಬ್ರವರಿ 3 ರಿಂದ 5 ರವರೆಗೆ ಆಚರಿಸಲಾಗುತ್ತಿದೆ.
ಸಾರ್ವಜನಿಕರಿಗಾಗಿ ರವಿವಾರ, ಫೆಬ್ರವರಿ 5 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1:30 ರ ವರೆಗೆ ಆಯೋಜಿರುವ ಆಧ್ಯಾತ್ಮಿಕ ಸಮ್ಮೇಳನದಲ್ಲಿ ಮತ್ತು ಅದೇ ದಿನ ಸಂಜೆ 6 ರಿಂದ 8 ರವರೆಗೆ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ್ ಜಯತೀರ್ಥ ಮೇವುಂಡಿಯವರು ನಡೆಸಿಕೊಡಲಿರುವ ಭಜನ ಸಂಧ್ಯಾ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಗಾವಿಯ ಸಾರ್ವಜನಿಕರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಬೆಳಗಾವಿಯ ಕೋಟೆ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿಗಳು ವಿನಂತಿಸಿಕೊಂಡಿದ್ದಾರೆ.
ವಾರ್ಷಿಕೋತ್ಸವದ ಅಂಗವಾಗಿ ಫೆಬ್ರವರಿ 3 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1:30 ರ ವರೆಗೆ ಸುಮಾರು 700 ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಯುವಸಮ್ಮೇಳನವನ್ನು ಮತ್ತು ಫೆ.4 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1:30 ರ ವರೆಗೆ 700 ಶಿಕ್ಷಕರು ಮತ್ತು ಬಿ ಎಡ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಶಿಕ್ಷಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳ ಉದ್ದೇಶ ಶ್ರೀರಾಮಕೃಷ್ಣ, ಶ್ರೀಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಜೀವನ ಹಾಗೂ ಸಂದೇಶಗಳನ್ನು, ಉದಾತ್ತ ವೇದಾಂತ ಸಂದೇಶಗಳನ್ನು, ಭಾರತೀಯ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯನ್ನು ಜನಮಾನಸದಲ್ಲಿ ಬಿತ್ತುವುದು. ಈ ಉನ್ನತ ಚಿಂತನೆಗಳು ಜನರ ಜೀವನದಲ್ಲಿ ಶ್ರೇಯಸ್ಸನ್ನು ತಂದು, ಅವರ ಜೀವನ ಸುಖ-ಶಾಂತಿಯಿಂದ ಕೂಡಿ, ತನ್ಮೂಲಕ ಶ್ರೇಷ್ಠ ಸಮಾಜ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ ಎಂದು ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿಗಳು ತಿಳಿಸಿದ್ದಾರೆ