ಹೊಸ ಜಿಲ್ಲೆ ಅಸ್ತಿತ್ವಕ್ಕೆ ತರುವ ಸುಳಿವು ನೀಡಿದ ಸಿಎಂ
ಯುವ ಭಾರತ ಸುದ್ದಿ ಶಿರಸಿ :
ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಮತ್ತೊಂದು ಹೊಸ ಜಿಲ್ಲೆ ಉದಯವಾಗುವ ಸಾಧ್ಯತೆ ಇದೆ. ಈ ಮೂಲಕ ಎರಡು ವರ್ಷಗಳ ನಂತರ ಕರ್ನಾಟಕದಲ್ಲಿ ಮತ್ತೊಂದು ಜಿಲ್ಲೆ ಅಸ್ತಿತ್ವಕ್ಕೆ ಬರುವ ಲಕ್ಷಣ ಗೋಚರಿಸಿದೆ.
ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ ಶಿರಸಿ ಜಿಲ್ಲೆ ರಚಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದು ಹೊಸ ಜಿಲ್ಲೆ ರಚಿಸುವ ಬಗ್ಗೆ ಬೇಡಿಕೆ ಮತ್ತೊಮ್ಮೆ
ಬಂದಿದೆ. ಸದ್ಯವೇ ಕರ್ನಾಟಕದಲ್ಲಿ ಮತ್ತೊಂದು ಹೊಸ ಜಿಲ್ಲೆ ರಚನೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಇಂದು ಶಿರಸಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿರಸಿ ಜಿಲ್ಲೆ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದ್ದಾರೆ. ರಾಜ್ಯದ ವಿವಿಧ ಕಡೆ ಹೊಸ ಜಿಲ್ಲೆಗಳ ಬೇಡಿಕೆ ಇದೆ. ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.
2021 ರಲ್ಲಿ ವಿಜಯನಗರ ಕರ್ನಾಟಕದ 31 ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತ್ತು. ಬೆಳಗಾವಿಯಲ್ಲಿ ಚಿಕ್ಕೋಡಿ ಮತ್ತು ಗೋಕಾಕ್ ಜಿಲ್ಲೆ ರಚಿಸುವ ಪ್ರಸ್ತಾಪವಿದೆ. ಅದರಂತೆ ರಾಜ್ಯದಲ್ಲೆಡೆ ಮಧುಗಿರಿ, ಕುಂದಾಪುರ, ಪುತ್ತೂರು, ಸಾಗರ, ಇಂಡಿ, ತಿಪಟೂರು, ಶಿಕಾರಿಪುರ, ಸಿಂಧನೂರು, ಅಥಣಿ, ಜಮಖಂಡಿ ಹೊಸ ಜಿಲ್ಲೆ ರಚಿಸುವ ಆಗ್ರಹ ಇದೆ.