ಅಶೋಕ ಚಂದರಗಿ ಸರಕಾರಕ್ಕೆ ಕಿವಿಮಾತು!
ಯುವ ಭಾರತ ಸುದ್ದಿ ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಇಂದು ಸಂಜೆ 7ಕ್ಕೆ ಕೇಂದ್ರ ಗೃಹ ಸಚಿವ ಅಮಿತ ಶಾ ನೇತೃತ್ವದಲ್ಲಿ ಎರಡೂ ರಾಜ್ಯಗಳ ಸಿಎಂ ಗಳ ಸಭೆ ನವದೆಹಲಿಯಲ್ಲಿ ನಡೆಯಲಿದೆ.
ಈ ಮಧ್ಯೆ ಅಂದಿನ ಕರ್ನಾಟಕ ಮುಖ್ಯಮಂತ್ರಿ ಬಿ.ಡಿ.ಜತ್ತಿ ಅವರು 1960ರಲ್ಲೇ ಅಂದಿನ ಕೇಂದ್ರ ಗೃಹ ಸಚಿವ ಗೋವಿಂದ ವಲ್ಲಭ ಪಂತ ಅವರ ಸೂಚನೆ ಮೇರೆಗೆ ಮುಂಬೈಗೆ ತೆರಳಿ ಗಡಿ ಸಮಸ್ಯೆ ಬಗ್ಗೆ ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ವೈ. ಬಿ. ಚವ್ಹಾನ ಅವರೆದುರು ಮಾತುಕತೆಗೆ ಕುಳಿತು ಕರ್ನಾಟಕದ ಹಿತಾಸಕ್ತಿ ಕಾಯ್ದುಕೊಂಡಿದ್ದರು. ವೈ. ಬಿ. ಚವ್ಹಾನ ಅವರ ಜೊತೆ ನಡೆದ ಮಾತುಕತೆಯ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ‘we agree for disagree’ ಎಂದಿದ್ದರು. ಆ ಹೇಳಿಕೆಯನ್ನೇ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಮಿತ ಷಾ ಮುಂದೆ ಯಾವುದೇ ಅಳುಕಿಲ್ಲದೇ ನುಡಿದು ಬರಬೇಕು ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಸರಕಾರಕ್ಕೆ ಪತ್ರ ಬರೆದು ತುರ್ತು ಸಂದೇಶ ನೀಡಿದ್ದಾರೆ.
ಮಹಾರಾಷ್ಟ್ರದ ನಾಟಕ ಮತ್ತು ಒತ್ತಡ ತಂತ್ರಕ್ಕೆ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವರ ಎದುರು ಮಂಡಿಯೂರಕೂಡದು ಎಂದು ಬೆಳಗಾವಿ ಕನ್ನಡಿಗರು ಆಗ್ರಹಿಸಿದ್ದಾರೆ.
ಅಂದು 1966ರಲ್ಲಿ ಮತ್ತೊಬ್ಬ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಗಡಿವಿವಾದ ಸಂಬಂಧ ಮಹಾಜನ ಕಮಿಷನ್ ನೇಮಕ ಮಾಡುವ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಒತ್ತಡದ ನಿರ್ಧಾರಕ್ಕೆ ಮಣಿದು ಒಪ್ಪಿಗೆ ಸೂಚಿಸಿದ್ದರು.
ನಿಜಲಿಂಗಪ್ಪನವರ ಹಾದಿ ತುಳಿಯದೇ, ಬಿ. ಡಿ. ಜತ್ತಿ ಅವರಂತೆ ಕಠಿಣವಾಗಿ ವರ್ತಿಸಬೇಕು, ಯಾವುದೇ ಒತ್ತಡಕ್ಕೆ ಒಳಗಾಗಬಾರದು ಎಂದು ಅಶೋಕ ಚಂದರಗಿ ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ.