ರಮೇಶ ಜಾರಕಿಹೊಳಿ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು ?
ಯುವ ಭಾರತ ಸುದ್ದಿ ಬೆಳಗಾವಿ : ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸೋಮವಾರ ಬೆಳಗಾವಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕೆಂಡ ಕಾರಿದ್ದಾರೆ.
ಡಿ.ಕೆ.ಶಿವಕುಮಾರ್ ರಾಜಕೀಯ ಮಾಡಲು ನಾಲಾಯಕ್. ಒಂದೂವರೆ ವರ್ಷದಿಂದ ಸಮಾಧಾನದಿಂದ ಇದ್ದೆ. ವೈಯಕ್ತಿಕ ರಾಜಕೀಯ ಮಾಡಬಾರದು. ರಾಜಕಾರಣದಲ್ಲಿ ಷಡ್ಯಂತ್ರ ಮಾಡಿದ್ದಾನೆ. ವೈಯಕ್ತಿಕ ಟೀಕೆ ಮಾಡಿ ಜೀವನ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನನ್ನ ವಿರುದ್ಧ ಆತ ನಡೆಸಿದ ಷಡ್ಯಂತ್ರದ ದಾಖಲೆ ಇದೆ. ಅದನ್ನು ಸಿಬಿಐಗೆ ಕೊಡುವೆ. ನನ್ನಲ್ಲಿ ಸುಮಾರು 120 ಗಂಟೆಗಳ ಕಾಲದ ದಾಖಲೆ ಇದೆ. ಅದನ್ನು ತನಿಖೆಗೆ ಸಿಬಿಐಗೆ ನೀಡುವೆ ಎಂದು ಹೇಳಿದರು.
1985 ರಲ್ಲಿ ನಾನು ಹಾಗೂ ಡಿಕೆಶಿ ಇಬ್ಬರು ರಾಜಕೀಯ ಪ್ರವೇಶ ಮಾಡಿದೆವು. ಆಗ ನಾನು ನೋಡಿದಾಗ ಆತ ಹರಿದ ಚಪ್ಪಲಿ ಹಾಕುತ್ತಿದ್ದ. ಸಾವಿರಾರು ಕೋಟಿ ಮಾಲಿಕನಾಗಿ ರಾಜ್ಯವನ್ನು ಲೂಟಿ ಎಸಗಿ ಭ್ರಷ್ಟಾಚಾರ ಮಾಡಿದ್ದಾನೆ. ಈಗ ಅಗರ್ಭ ಶ್ರೀಮಂತ ಆಗಿದ್ದಾನೆ. ಮಹಿಳೆಯನ್ನು ಮುಂದಿಟ್ಟುಕೊಂಡು ನನ್ನ ತೇಜೋವಧೆ ಮಾಡಲಾಯಿತು ಎಂದು ಆರೋಪಿಸಿದರು.
ನನ್ನ ವಿರುದ್ಧದ ಸಿಡಿ ಬಿಡುಗಡೆ ನಂತರ ಡಿಕೆಶಿ ಭಯಗೊಂಡು ಆಪ್ತರೊಬ್ಬರಿಗೆ ಕರೆ ಮಾಡಿ ಸಿಡಿ ಷಡ್ಯಂತ್ರ ನಾನು ಮಾಡಿಲ್ಲ, ಅದನ್ನು ಬೆಳಗಾವಿ ಜಿಲ್ಲೆಯ ವ್ಯಕ್ತಿ ಮಾಡಿದ್ದಾರೆ ಎಂದು ಹೇಳಿಕೊಂಡ. ಬೆಳಗಾವಿ ಗ್ರಾಮೀಣ ಶಾಸಕಿಯ ಕಾರಣದಿಂದ ರಾಜಕೀಯ ಹಾಗೂ ವೈಯಕ್ತಿಕ ಹಗೆತನ ಬೆಳೆದಿದೆ. ಕೇವಲ ಒಂದು ಸಿಡಿಯಲ್ಲ. ನೂರಾರು ಸಿಡಿ ಅವನ ಬಳಿ ಇದೆ ಎಂದು ಹೇಳಿದರು.
ನನ್ನ ಮತ್ತು ಡಿಕೆಶಿ ಸಂಬಂಧ ಹಾಳಾಗಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ. ರಾಜ್ಯದಲ್ಲಿ ಸಿಡಿ ಮಾಡಲು ಒಂದು ಗ್ಯಾಂಗ್ ಸಕ್ರಿಯವಾಗಿದೆ. ಬೆಳಗಾವಿ ಮೂಲದ ಅಧಿಕಾರಿಯೊಬ್ಬರು ಸಿಡಿ ಮಾಡಿ ಕೋಟ್ಯಂತರ ಹಣ ಲೂಟಿ ಮಾಡಿದ್ದಾರೆ. ಸರ್ಕಾರ ಈ ಗ್ಯಾಂಗ್ ನ್ನು ಸದೆ ಬಡಿಯಲು ಮುಂದಾಗಬೇಕು. ಕೆಲವು ಆಡಿಯೋವನ್ನು ತಿದ್ದುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಜಾತಿ ಸಂಘರ್ಷ ನಡೆದರೆ ಅದಕ್ಕೆ ಡಿ.ಕೆ.ಶಿವಕುಮಾರ್ ನೇರ ಕಾರಣರಾಗುತ್ತಾರೆ ಎಂದು ಹೇಳಿದರು.
ಸಿಡಿ ಹಗರಣದ ಷಡ್ಯಂತ್ರವನ್ನು ಮಹಾ ನಾಯಕ ಡಿಕೆಶಿ ಮಾಡಿದ್ದಾರೆ. ಅದಕ್ಕೆ ಆರು ಜನ ಕೈ ಜೋಡಿಸಿದ್ದಾರೆ. ಶಿರಾ ಮೂಲದ ನರೇಶ, ಮಂಡ್ಯದ ಇಬ್ಬರು ಪತ್ರಕರ್ತರು ಸೇರಿದಂತೆ ಆರು ಜನರನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದರು.
ನೀರಾವರಿ ಇಲಾಖೆಯಲ್ಲಿ ಅಕ್ರಮಕ್ಕೆ ಅವಕಾಶ ಒದಗಿಸಿದ್ದರೆ ಈ ಸಿಡಿ ಹೊರಗೆ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.
ನಾನು ಸಹಕಾರ ಸಚಿವನಾಗಿದ್ದಾಗ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಫೈಲ್ ಕ್ಲಿಯರ್ ಮಾಡಿ ಎಂದು ಡಿಕೆಶಿ ನನ್ನ ಬೆನ್ನು ಬಿದ್ದಿದ್ದರು. ನಾನು ಯಾವಾಗ ಫೈಲ್ ಕ್ಲಿಯರ್ ಮಾಡಲಿಲ್ಲವೋ ಅಲ್ಲಿಂದ ವೈಯಕ್ತಿಕ ದ್ವೇಷ ಶುರುವಾಗಿದೆ ಎಂದು ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಳಾಗಲು ಪ್ರಮುಖ ಕಾರಣ ಡಿ.ಕೆ. ಶಿವಕುಮಾರ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್. ಲಕ್ಷ್ಮಿ ಹೆಬ್ಬಾಳ್ಕರ್ ವಿಶ್ವಕನ್ಯೆ. ಈ ವಿಷಕನ್ಯೆಯಿಂದ ಕಾಂಗ್ರೆಸ್ ಹೋಳಾಗಲಿದೆ ಎಂದು ಎಂದು ರಮೇಶ್ ವಾಗ್ದಾಳಿ ನಡೆಸಿದರು.
ನನ್ನ ಬಳಿ ದುಬೈ ಹಾಗೂ ಲಂಡನ್ ನಲ್ಲಿ ಮನೆ ಇದೆ, ಸಾವಿರಾರು ಕೋಟಿ ಆಸ್ತಿ ಇದೆ ಎಂದು ಡಿಕೆಶಿ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ ಎಂದು ರಮೇಶ್ ಜಾರಕಿಹೊಳಿ ಅವರು ಹೊಸ ಬಾಂಬ್ ಸಿಡಿಸಿದರು.
ನನ್ನ ಬಳಿ 20 ಸಿಡಿಗಳಿಗೆ ಆಡಿಯೋ ಸೇರಿದಂತೆ ವಿಡಿಯೋ ಸಹ ಇದೆ. ಸೂಕ್ತ ಸಂದರ್ಭದಲ್ಲಿ ನಾನು ಸಹ ಅದನ್ನು ಬಿಡುಗಡೆ ಮಾಡುತ್ತೇನೆ. ಆತ ಷಡ್ಯಂತ್ರ ಮಾಡಿ 120ಕ್ಕೂ ಹೆಚ್ಚು ನಾಯಕರು ಮತ್ತು ಅಧಿಕಾರಿಗಳ ಸಿಡಿ ಮಾಡಿದ್ದಾನೆ. ಡಿಕೆಶಿ, ನರೇಶ್ ಹಾಗೂ ಶ್ರವಣ್ ಅವರ ಬಂಧನವಾಗಬೇಕು. ನರೇಶ್ ಮತ್ತು ಶ್ರವಣ್ ಮತ್ತು ಇತರರು ಡಿಕೆಶಿಯ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆ. ಡಿಕೆಶಿಯ ಸಿಡಿ ಷಡ್ಯಂತ್ರದಲ್ಲಿ ಅಧಿಕಾರಿಗಳು ರಾಜಕಾರಣಿಗಳು ಇದ್ದಾರೆ ಎಂದು ಅವರು ಹೇಳಿದರು.