ಸಂಚಾರಿ ಇ- ಚಲನ್ ಪ್ರಕರಣಗಳ ಮೊತ್ತ ಶೇ.50 ರಷ್ಟು ರಿಯಾಯಿತಿ ; ದಂಡ ರಿಯಾಯಿತಿ ಸೌಲಭ್ಯ ಸದ್ಬಳಕೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಸಲಹೆ
ಯುವ ಭಾರತ ಸುದ್ದಿ ಬೆಳಗಾವಿ :
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜಿಲ್ಲೆಯಲ್ಲಿ ಬಾಕಿ ಪೊಲೀಸ್ ಇಲಾಖೆಯ ಸಂಚಾರಿ – ಇ ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ. ವಾಹನ ಸವಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ತಿಳಿಸಿದರು.
ನಗರದ ಹೊಸ ನ್ಯಾಯಾಲಯ ಸಂಕೀರ್ಣದ ವಿಡಿಯೋ ಕಾನ್ಫರೆನ್ಸ್ ಹಾಲ್ ನಲ್ಲಿ ಶನಿವಾರ (ಫೆ.04) ನಡೆದ ಪೊಲೀಸ್ ಇಲಾಖೆಯ ಸಂಚಾರಿ – ಇ-ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ರಿಯಾಯಿತಿ ಮೊತ್ತ ಪಾವತಿಸುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಟ್ರಾಫಿಕ್ ಪ್ರಕರಣಗಳ ದಂಡ ವಸೂಲಿ ನಿನ್ನೆಯಿಂದ ಸುಮಾರು 5.5 ಕೋಟಿ ಆಗಿದೆ.
ಜಿಲ್ಲೆಯಲ್ಲಿ ಈ ವರೆಗೆ 6.28 ಲಕ್ಷ ಪ್ರಕರಣಗಳಲ್ಲಿ ನಲ್ಲಿ 26 ಕೋಟಿಯಷ್ಟು ದಂಡ ಬಾಕಿ ಇದ್ದು, ಸಾರ್ವಜನಿಕರು ತಮ್ಮ ವಾಹನಗಳಿಗೆ ಸಂಬಂಧಪಟ್ಟ ದಂಡದ ಒಟ್ಟು ಮೊತ್ತದಲ್ಲಿ ಶೇಕಡಾ 50 ರಷ್ಟು ದಂಡ ಕಟ್ಟಿ ವಾಹನ ದಂಡ ಮುಕ್ತ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕರಿಗೆ ಈಗಾಗಲೇ ದಂಡ ರಿಯಾಯಿತಿ ಕುರಿತು ಮಾಹಿತಿ ನೀಡಲಾಗಿದೆ. ಫೆ.11 ರಂದು ಈ ರಿಯಾಯತಿ ಮುಕ್ತಾಯ ಆಗಲಿದೆ ಎಲ್ಲಾ ಸಂಬಂಧಿತ ವಾಹನ ಸವಾರರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಫೆ.11 ರಂದು ಲೋಕ್ ಅದಾಲತ್ :
ಅದೇ ರೀತಿಯಲ್ಲಿ ಈ ವರ್ಷದ ಮೊದಲನೇ ರಾಷ್ಟ್ರೀಯ ಲೋಕ ಅದಾಲತ್ ಫೆ 11 ರಂದು ಹಮ್ಮಿಕೊಳ್ಳಲಾಗಿದೆ. ಲೋಕ್ ಅದಾಲತ್ ನಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ತಯಾರಿ ನಡೆಸಲಾಗುತ್ತಿದೆ. ಕಳೆದ ಲೋಕ ಅದಾಲತ್ ನಲ್ಲಿ ಸುಮಾರು 14 ಸಾವಿರ ಪ್ರಕರಣಗಳ ಇತ್ಯರ್ಥ ಮಾಡಲಾಗಿದೆ ಈ ಬಾರಿಯೂ ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಅವರು ತಿಳಿಸಿದರು.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಡಾ. ಎಂ. ಬಿ ಬೋರಲಿಂಗಯ್ಯ ಅವರು, ಆನ್ ಲೈನ್ ಮೂಲಕ ದಂಡ ಪಾವತಿ ಮಾಡಲು ಬೆಳಗಾವಿ ಒನ್ ಆನ್ ಲೈನ್ ಕಚೇರಿ ಮೂಲಕ ಅವಕಾಶ ಕಲ್ಪಿಸಲಾಗಿದೆ. ಕಳೆದ 3 ವರ್ಷಗಳಿಂದ ಸದರಿ ಪ್ರಕರಣಗಳ ದಂಡ ಬಾಕಿ ಉಳಿದಿವೆ ಹಾಗಾಗಿ ವಾಹನ ಸವಾರರು ದಂಡ ಪಾವತಿಸಬೇಕು ಎಂದು ತಿಳಿಸಿದರು.
ಟ್ರಾಫಿಕ್ ಸಿಗ್ನಲ್ ಬ್ರೇಕ್, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಸೇರಿದಂತೆ ಯಾವುದೇ ಮ್ಯಾನುವಲ್ ಪ್ರಕರಣಗಳು ಬಾಕಿ ಇರುವುದಿಲ್ಲ ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ ಹಾಗಾಗಿ ವಾಹನ ಸವಾರರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆ ಆಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಹೇಳಿದರು.
ಅಪರಾಧ ವಿಭಾಗದ ಡಿಸಿಪಿ ಸ್ನೇಹಾ ಹಾಗೂ ಇತರೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.