ಶ್ರೇಷ್ಠ ಕೀರ್ತನೆಗಳ ಮೂಲಕ ಕನಕದಾಸರು ದಾಸಶ್ರೇಷ್ಠರಲ್ಲೊಬ್ಬರು-ಭೀಮಶಿ ಭರಮನ್ನವರ.!
ಗೋಕಾಕ: ಮೇಲು ಕೀಳೆಂಬ ಭಾವವೇ ಸುಳ್ಳು, ಶುದ್ಧ ಭಕ್ತಿ, ಪವಿತ್ರ ಮನಸ್ಸಿದ್ದರೆ ದೇವರು ತಾನಾಗಿಯೇ ಒಲಿಯಬಲ್ಲ ಎಂಬುದನ್ನು ಅರ್ಥಮಾಡಿಸಿದವರು ಕನಕದಾಸರು. ಅದಕ್ಕೆಂದೇ ಉಡುಪಿಯ ಕೃಷ್ಣ ಪರಮಾತ್ಮ ಶುದ್ಧ ಮನಸ್ಸಿನ ಕನಕದಾಸರ ಭಕ್ತಿಗೆ ಒಲಿದು ಗೋಡೆಯೊಡೆದು ದರ್ಶನ ನೀಡಿದರು ಎಂದು ಬಿಜೆಪಿ ನಗರ ಮಂಟಲ ಅಧ್ಯಕ್ಷ ಭೀಮಶಿ ಭರಮನ್ನವರ ಹೇಳಿದರು.
ಅವರು, ನಗರದ ಬಿಜೆಪಿ ಕಾರ್ಯಾಲಯದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ ಎಂಬಿತ್ಯಾದಿ ಶ್ರೇಷ್ಠ ಕೀರ್ತನೆಗಳ ಮೂಲಕ ಕನಕದಾಸರು ದಾಸಶ್ರೇಷ್ಠರಲ್ಲೊಬ್ಬರು ಎಂದರು.
ಹಾವೇರಿ ಜಿಲ್ಲೆಯ ಬಾಡದಲ್ಲಿ ಜನಿಸಿದ ಕನಕದಾಸರು, ಕಾಗಿನೆಲೆಯ ಆದಿಕೇಶವರಾಯ ಎಂಬ ಅಂಕಿತನಾಮದೊAದಿಗೆ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ. ರಾಜ್ಯದಾದ್ಯಂತ ಅವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಜಕೀಯ, ಜಾತಿ ಓಲೈಕೆಗಳ ಕಸರತ್ತುಗಳನ್ನೆಲ್ಲ ಆಚೆ ಇಟ್ಟು ಒಬ್ಬ ಶ್ರೇಷ್ಠಾತಿ ಶ್ರೇಷ್ಠ ದಾಸರನ್ನಾಗಿ ಕನಕದಾಸರನ್ನು ಕಂಡರೆ, ಕಾಗಿನೆಲೆಯ ಆದಿಕೇಶವನೂ ಮೆಚ್ಚುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಮುಖಂಡರಾದ ಅಶೋಕ ಗೋಣಿ, ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ, ಸಿದ್ದಪ್ಪ ಹುಚ್ಚರಾಮಪ್ಪಗೋಳ, ಅಬ್ದುಲಸತ್ತಾರ ಶಭಾಶಖಾನ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೆಯರ, ವಿರೇಂದ್ರ ಎಕ್ಕೇರಿಮಠ ಸೇರಿದಂತೆ ಕಾರ್ಯಕರ್ತರು ಇದ್ದರು.