Breaking News

ಪ್ರಾಮಾಣಿಕ ಸೇವೆಯೊಂದೇ ಈ ವೈದ್ಯ ದಂಪತಿ ಗುರಿ.!

Spread the love

ಪ್ರಾಮಾಣಿಕ ಸೇವೆಯೊಂದೇ ಈ ವೈದ್ಯ ದಂಪತಿ ಗುರಿ||
ಎಚ್‌ಐವಿ ಸೋಂಕಿತ ಗರ್ಭಿಣಿಯರಿಗೂ ಉತ್ತಮ ಚಿಕಿತ್ಸೆ ನೀಡಿದ ಡಾ.ಮಂಗಲಾ | ಪಶು ಸಂಗೋಪನೆಯಲ್ಲಿ ಉತ್ತಮ ಸೇವೆ ನೀಡಿದ ಡಾ.ಮೋಹನ!
ಯುವ ಭಾರತ ಸುದ್ದಿ  ಗೋಕಾಕ: ನಿನ್ನ ಕಾಯಕ ನೀನು ಮಾಡು. ಅದರ ಪ್ರತಿಫಲಾಪೇಕ್ಷೆ ನಿನಗೆ ಬೇಡ ಎಂಬ ಆಶಯದಂತೆ ಸಮಾಜ ಸೇವೆಗೆ ಇವರನ್ನು ಆಯ್ಕೆ ಮಾಡಿಕೊಂಡಿರುವುದು ವೈದ್ಯಕೀಯ ಕ್ಷೇತ್ರವನ್ನು. ಇವರ ನಿಷ್ಕಲ್ಮಶ ಕಾಯಕ, ಜನಸೇವೆ ಮತ್ತೊಬ್ಬರಿಗೆ ಮಾದರಿಯಾಗುವಂತಿದೆ. ಸುತ್ತಮುತ್ತಲ ಜನರ ಪ್ರಶಂಸೆಯನ್ನು ನಿರೀಕ್ಷೆ ಮಾಡದೇ ನಿಸ್ವಾರ್ಥ ಸೇವೆಯೆಂಬ ದಾರಿಯೊಂದರಲ್ಲೇ ಸಾಗುತ್ತಿದ್ದಾರೆ ಈ ದಂಪತಿ.
ಹೌದು. ಅವರೇ ಸ್ತ್ರೀರೋಗ ಮತ್ತು ಪಸೂತಿ ತಜ್ಞೆಯಾಗಿರುವ ಡಾ.ಮಂಗಲಾ ಸನದಿ (ಕಮತ) ಅವರು. ಇವರ ಪತಿ ಡಾ.ಮೋಹನ ಕಮತ ಕೂಡ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರೂ ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರಗಳಲ್ಲಿ ಚಾಚೂ ತಪ್ಪದೆ ಪ್ರಾಮಾಣಿಕವಾಗಿ ಜನಸೇವೆಯನ್ನು ಮುಂದುವರಿಸಿದ್ದಾರೆ.
ಹೆರಿಗೆ ಆಸ್ಪತ್ರೆಗೆ ಗೌರವ ತಂದುಕೊಟ್ಟ ಡಾ.ಮಂಗಲಾ
ಡಾ.ಮಂಗಲಾ ಸನದಿ (ಕಮತ) ಅವರು ಸ್ತ್ರೀರೋಗ ಮತ್ತು ಪಸೂತಿ ವಿಭಾಗದಲ್ಲಿ ಎತ್ತಿದ ಕೈ. ಕಳೆದ ೨೦ ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಬಡ ರೋಗಿಗಳ ಪಾಲಿನ ಜೀವರಕ್ಷಕಿಯೇ ಆಗಿದ್ದಾರೆ ಎಂದರೆ ಅಭಿಶಯೋಕ್ತಿಯೇನಲ್ಲ. ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿ ಬಂದಿರುವ ಅವರು, ಪ್ರಸ್ತುತ ಗೋಕಾಕ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿಯೇ ಪಿಪಿಐಯುಸಿಡಿ (ಸಂತಾನಹರಣ ಶಸ್ತ್ರಚಿಕಿತ್ಸೆ) ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
೨೦೦೨ರಲ್ಲಿ ಗೋಕಾಕ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ತಿಂಗಳಿಗೆ ೧೦೦ರಿಂದ ೧೨೦ಕ್ಕೂ ಹೆಚ್ಚು ಹೆರಿಗೆ ಮಾಡುತ್ತ ಬಂದಿದ್ದರು. ತದನಂತರ ಕ್ರಮೇಣವಾಗಿ ತಿಂಗಳಿಗೆ ೪೦೦ ರಿಂದ ೪೫೦ರವರೆಗೆ ಹೆರಿಗೆ ಸಂಖ್ಯೆ ಏರಿಕೆಯಾಯಿತು. ಹೆರಿಗೆ ಸಂಖ್ಯೆ ಪ್ರಮಾಣ ಏರಿಕೆಯಾಗಿದ್ದರಿಂದ ಶಾಸಕ ಹಾಗೂ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಅವರು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯಾರಂಭ ಮಾಡಿದರು. ಡಾ.ಮಂಗಲಾ ಸನದಿ (ಕಮತ) ಅವರ ಸೇವೆ ಗೋಕಾಕ ಸಾರ್ವಜನಿಕ ಆಸ್ಪತ್ರೆಯ ಚಿತ್ರಣವನ್ನೇ ಬದಲು ಮಾಡಿತು.
ಎಚ್‌ಐವಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ, ಹೆರಿಗೆ
ಎಚ್‌ಐವಿ ಸೋಂಕಿತ ಮಹಿಳೆಯರು ಗರ್ಭಿಣಿಯರಾದಾಗ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದಾರೆ. ಅಗತ್ಯ ಸಲಹೆಗಳನ್ನು ಕೂಡ ಕೊಟ್ಟಿದ್ದಾರೆ. ಇವೆಲ್ಲದರ ಜತೆಗೆ ಸೋಂಕಿತ ಮಹಿಳೆಯರಿಗೆ ಹುಟ್ಟುವ ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲದಂತೆ ಚಿಕಿತ್ಸೆ ನೀಡಿದ್ದಾರೆ. ಡಾ.ಮಂಗಲಾ ಅವರ ಚಿಕಿತ್ಸೆಯ ಕ್ರಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈಗಲೂ ಗೋಕಾಕ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ಪ್ರಸೂತಿ ತಜ್ಞ ವಿಭಾಗ ಬೆಳಗಾವಿ ಜಿಲ್ಲೆಯಲ್ಲಿಯೇ ಹೆಚ್ಚು ಪ್ರಚಲಿತಕ್ಕೆ ಬರಲು ಕಾರಣ ಡಾ.ಮಂಗಲಾ ಅವರೇ. ಇದಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕೂಡ ಸ್ಥಳೀಯ ಶಾಸಕರಾದ ರಮೇಶ ಜಾರಕಿಹೊಳಿ ಒದಗಿಸಿದ್ದಾರೆ.
ಒಲಿದ ಪ್ರಶಸ್ತಿಗಳು:
ಡಾ.ಮಂಗಲಾ ಅವರನ್ನು ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಆದರೆ, ಯಾವ ಪ್ರಶಸ್ತಿಗಳನ್ನು ತೆಗೆದುಕೊಳ್ಳಲು ಡಾ.ಮಂಗಲಾ ಅವರು ಹೋಗಲಿಲ್ಲ. ಪ್ರಶಸ್ತಿಯ ಹಿಂದೆ ಎಂದೂ ಅವರು ಹೋಗಿಲ್ಲ. ಬದಲಾಗಿ ಅವರನ್ನು ಹುಡುಕಿಕೊಂಡೇ ಬಂದಿವೆ. ೨೦೧೦ರಲ್ಲಿ ಕೆಎಸ್‌ಎಪಿಎಸ್‌ನ ಪ್ರಶಸ್ತಿ ಬಂದಿದೆ. ಬೆಳಗಾವಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯಿಂದ ೨೦೧೩-೧೪ರಲ್ಲಿ ಅವರ ಉತ್ತಮ ಕಾರ್ಯನಿರ್ವಹಣೆಗೆ ಪ್ರಶಂಸನಾ ಪತ್ರ ದೊರೆತಿದೆ. ೨೦೦೨ರಿಂದ ಇಲ್ಲಿಯವರೆಗೆ ಹತ್ತು ಹಲವಾರು ಗೌರವ, ಸನ್ಮಾನಗಳು ಬಂದರೂ ಅದರಿಂದ ಹಿಗ್ಗದೇ ತಮ್ಮ ವೈದ್ಯ ಸೇವೆಯನ್ನು ನಿಷ್ಕಳಂಕವಾಗಿ, ಪ್ರಾಮಾಣಿಕವಾಗಿ ಬಡಜನರಿಗೆ ಒದಗಿಸುವ ಮೂಲಕ ಸಂತೃಪ್ತಿ ಬದುಕು ನಡೆಸುತ್ತಿದ್ದಾರೆ.
ಪಶು ಸೇವೆಯೇ ಈಶ ಸೇವೆ
ಪಶು ಸೇವೆಯಲ್ಲಿಯೇ ಈಶ ಸೇವೆ ಕಂಡವರು ಡಾ.ಮಂಗಲಾ ಸನದಿ (ಕಮತ) ಅವರ ಪತಿ ಡಾ.ಮೋಹನ ಕಮತ ಅವರು. ಇವರು ಕೂಡ ಪ್ರಸ್ತುತ ಪಶು ಸಂಗೋಪನಾ ಇಲಾಖೆಯಲ್ಲಿ ಸಹಾಯ ನಿರ್ದೇಶಕರಾಗಿ ಗೋಕಾಕನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಡಲಗಿಯಲ್ಲಿಯೂ ಇವರೇ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಣಿಗಳ ಆರೋಗ್ಯದ ಕುರಿತು ಸದಾ ಕಾಳಜಿ ಹೊಂದಿರುವ ಡಾ.ಮೋಹನ ಅವರು ಅವುಗಳ ಸೇವೆಯಲ್ಲಿಯೇ ತೃಪ್ತಿ ಕಾಣುತ್ತಿದ್ದಾರೆ. ಬಿವಿಎಸ್‌ಸಿ ಪದವಿಯನ್ನು ಬೆಂಗಳೂರು ಪಶುವೈದ್ಯಕೀಯ ಕಾಲೇಜಿನಲ್ಲಿ ಪಡೆದು, ಸ್ನಾತಕೋತ್ತರ ಪದವಿಯಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಪ್ರಾಣಿಗಳಿಗೆ ರೋಗಗಳು ಬಾರದಂತೆ ರೈತರಿಗೆ ಆಗಾಗ ಸಲಹೆ,ಸೂಚನೆಗಳನ್ನು ನೀಡುತ್ತಿರುತ್ತಾರೆ. ಪಶುಗಳಿಂದ ರೈತರು ಆರ್ಥಿಕವಾಗಿ ಸಬಲರಾಗಲು ಕೂಡ ಹಿಂದೆ ನಿಂತು ಶ್ರಮವಹಿಸುತ್ತಿದ್ದಾರೆ. ಇವರ ಕಾರ್ಯವೈಖರಿ ಮೆಚ್ಚಿ ಜಿಲ್ಲೆಯ ಅತ್ಯುತ್ತಮ ಪಶುವೈದ್ಯ ಪ್ರಶಸ್ತಿ ಮತ್ತು ರಾಜ್ಯಮಟ್ಟದ ಅತ್ಯುತ್ತಮ ಪಶುವೈದ್ಯ ನಕುಲ ಪ್ರಶಸ್ತಿ ಕೂಡ ಸಂದಿವೆ.
———————————————————————-
ಗೋಕಾಕ ತಾಲೂಕಿನಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ.ಮಂಗಲಾ ಸನದಿ (ಕಮತ) ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಗಿಗಳಿಗೆ ಅವರು ನೀಡುವ ಉಪಚಾರ ಎಲ್ಲರೂ ಸ್ಮರಿಸುವಂತಹದ್ದು. ಆಸ್ಪತ್ರೆಯ ಕೀರ್ತಿ ಜಿಲ್ಲೆಯಲ್ಲಿ ಹೆಚ್ಚಳವಾಗಲು ಅವರ ಶ್ರಮ ಕೂಡ ಕಾರಣವಾಗಿದೆ. ಜತೆಗೆ ಡಾ.ಮೋಹನ ಅವರ ಪಶು ಸಂಗೋಪನೆ ಇಲಾಖೆಯಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರೂ ಅವರ ಅವರ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆಯನ್ನು ಮುಂದುವರಿಸಿಕೊಂಡು ಹೋಗಲೆಂದು ಹಾರೈಸುವೆ.
ರಮೇಶ ಜಾರಕಿಹೊಳಿ, ಶಾಸಕರು, ಮಾಜಿ ಸಚಿವರು
———————————————————————-
ಡಾ.ಮಂಗಲಾ ಸನದಿ ಅವರು ಎಚ್‌ಐವಿ ಗರ್ಭಿಣಿಯರಿಗೆ ಉತ್ತಮವಾಗಿ ಚಿಕಿತ್ಸೆ ನೀಡಿ, ಸೋಂಕುರಹಿತ ಮಕ್ಕಳ ಜನನಕ್ಕೆ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಅವರ ಈ ಸೇವೆಯ ಮೂಲಕ ಆಸ್ಪತ್ರೆ ಮತ್ತು ತಾಲೂಕಿಗೆ ಉತ್ತಮ ಕೀರ್ತಿ ಕೂಡ ದೊರೆತಿದೆ. ಅವರ ಪತಿ ಡಾ.ಮೋಹನ ಅವರು ಕೂಡ ಪಶು ಇಲಾಖೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಬ್ಬರ ಪ್ರಾಮಾಣಿಕ ಸೇವೆ ಹೀಗೆ ಮುಂದುವರಿಯಲಿ.
ಬಾಲಚಂದ್ರ ಜಾರಕಿಹೊಳಿ, ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರು

Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

5 × 3 =