ಉಕ್ಕಲಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ !
ಯುವ ಭಾರತ ಸುದ್ದಿ ಬಸವನಬಾಗೇವಾಡಿ:
ಉಕ್ಕಲಿ ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಸಾಕಷ್ಟು ಅರ್ಜಿಗಳು ಬಂದಿದ್ದು, ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಮ್ಮ ಅರ್ಜಿಗಳನ್ನು ನೀಡಲಾಗಿದೆ ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿದ್ದರೆ ಅಧಿಕಾರಿಗಳು ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸುತ್ತಾರೆ . ಸಮಸ್ಯೆ ತೀವ್ರವಾಗಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ ದುಂಡಪ್ಪ ಕೋಮಾರ ಹೇಳಿದರು.
ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಶನಿವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಕ್ಕಲಿ ಗ್ರಾಮದ ಕೆಜಿಎಸ್ ಹಾಗೂ ಎಂಪಿಎಸ್ ಶಾಲೆಗೆ ವಿಜ್ಞಾನ ಮತ್ತು ಗಣಿತ ಶಿಕ್ಷಕರನ್ನು ನೇಮಕಾತಿ ಮಾಡುವಂತೆ, ಗ್ರಾಮಕ್ಕೆ ಸರಕಾರಿ ಫ್ರೌಡ ಶಾಲೆ ಮಂಜೂರು ಮಾಡುವುದು, ಗ್ರಾಮದಲ್ಲಿ 24 ಗಂಟೆಗಳ ಕಾಲ ಅಂಬುಲೇನ್ಸ್ ಸೇವೆ ಒದಗಿಸುವುದು, ಗ್ರಾಮದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಆರಂಭಿಸುವುದು ಸೇರಿದಂತೆ ವಿವಿಧ ಸಮಸ್ಯೆ ಕುರಿತು ಅರ್ಜಿಗಳು ಬಂದಿರುವುದು ಕಂಡು ಬಂದಿತು.
ಸಭೆಯಲ್ಲಿ ಸಂಧ್ಯಾಸುರಕ್ಷಾ ಯೋಜನೆಯ 2, ಅಂಗವಿಕಲರ ಮಾಸಾಶನಕ್ಕಾಗಿ 2 ಅರ್ಜಿಗಳು ಬಂದಿದ್ದವು. ಅವುಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು. ವಿವಿಧ ಸಮಸ್ಯೆಗಳ ಕುರಿತು ಒಟ್ಟು 39 ಅರ್ಜಿಗಳನ್ನು ಗ್ರಾಮಸ್ಥರು ಸಲ್ಲಿಸಿದ್ದರು, 29 ಅರ್ಜಿಗಳ ವಿಲೇವಾರಿಯಾದವು. ಬಾಕಿ ಉಳಿದ ಅರ್ಜಿಗಳನ್ನು ಶೀಘ್ರದಲ್ಲೇ ಇತ್ಯರ್ಥ ಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚುವಯ್ಯ, ಲೋಕೊಪಯೋಗಿ ಇಲಾಕೆಯ ಜಿ,ಬಿ ಕಿರಸೂರ, ಸಿಡಿಪಿಓ ನಿರ್ಮಲಾ ಸುರಪುರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭವಾನಿ ಪಾಟೀಲ, ಹೆಸ್ಕಾಂ ಇಲಾಖೆಯ ವಿಜಯಕುಮಾರ ಬಿರಾದಾರ, ಮುಖಂಡರಾದ ಅಪ್ಪಾಸಾಹೇಬಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.