ಬಜೆಟ್ ಅಧಿವೇಶನದಲ್ಲಿ ಪತ್ರಕರ್ತರ ವಿವಿಧ ಬೇಡಿಕೆಗಳ ಚರ್ಚೆಗೆ ಆಗ್ರಹ
ಯುವ ಭಾರತ ಸುದ್ದಿ ಮುದ್ದೇಬಿಹಾಳ : ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ದಿನ, ವಾರ, ಪಾಕ್ಷಿಕ, ಮಾಸ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಪತ್ರಕರ್ತರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಮುಂಬರುವ ಬಜೆಟ್ ಅಧಿವೇಶನದಲ್ಲಿ ಪತ್ರಕರ್ತರ ಬೇಡಿಕೆಗಳ ಕುರಿತು ಚರ್ಚೆ ನಡೆಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭಾನುವಾರ ಮನವಿ ಪತ್ರ ಸಲ್ಲಿಸಲಾಯಿತು.
ತಾಲೂಕಿನ ಬಳವಾಟ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ಕಾನಿಪ ಧ್ವನಿ ಸಂಘಟನೆಯ ತಾಲೂಕಾಧ್ಯಕ್ಷ ಶಂಕರ ಹೆಬ್ಬಾಳ, ಪ್ರಧಾನ ಕಾರ್ಯದರ್ಶಿ ಗುಲಾಮಮೊಹ್ಮದ ದಫೇದಾರ ಅವರು, ಈಗಾಗಲೇ ಹಿಂದಿನ ಸರ್ಕಾರಗಳಲ್ಲಿ ಕೂಡಾ ಈ ಬಗ್ಗೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿರುವುದಿಲ್ಲ. ಮುಂಬರುವ ಬಜೆಟ್‌ನಲ್ಲಿ ರಾಜ್ಯದ ೧೬ ಸಾವಿರ ಪತ್ರಕರ್ತರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಹಲವು ಬೇಡಿಕೆಗಳನ್ನು ಈಡೇರಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಿ ಘೋಷಣೆ ಮಾಡಲು ಸರ್ಕಾರದ ಮೇಲೆ ತಾವು ಒತ್ತಡ ಹೇರಬೇಕು ಎಂದು ಕೋರಿದರು.
ಗ್ರಾಮೀಣ ಭಾಗದಲ್ಲಿರುವ ಪತ್ರಕರ್ತರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಓಡಾಡಲು ಬಸ್‌ಪಾಸ್ ವ್ಯವಸ್ಥೆ, ಹುಡ್ಕೋ ಬಡಾವಣೆಗಳಲ್ಲಿ ರಿಯಾಯತಿ ದರದಲ್ಲಿ ನಿವೇಶನ ನೀಡಬೇಕು. ಹೆಲ್ತ್ ಕಾರ್ಡ್ ಒದಗಿಸುವುದು, ಪತ್ರಕರ್ತರ ಮಧ್ಯವಿರುವ ತಾರತಮ್ಯ ಹೋಗಲಾಡಿಸಲು ಸರ್ಕಾರದಿಂದ ಸುತ್ತೋಲೆ ಹೊರಡಿಸುವುದು, ಪತ್ರಕರ್ತರ ಹಿತರಕ್ಷಣಾ ಕಾಯಿದೆ ಜಾರಿ, ಟೋಲ್‌ಗೇಟ್‌ಗಳಲ್ಲಿ ಮಾನ್ಯತೆ ಪಡೆದ ಪತ್ರಕರ್ತರಂತೆ ಗ್ರಾಮೀಣ ಪತ್ರಕರ್ತರಿಗೂ ಉಚಿತ ಪ್ರವೇಶ ನೀಡುವುದು, ಪ್ರವಾಸೋದ್ಯಮ ಸ್ಥಳಗಳಿಗೆ ಪತ್ರಕರ್ತರ ಕುಟುಂಬಕ್ಕೆ ಮುಕ್ತ ಪ್ರವೇಶ ನೀಡುವ ಕುರಿತು ಆದೇಶ ಮಾಡುವ ಬೇಡಿಕೆಗಳನ್ನು ಬಜೆಟ್‌ನಲ್ಲಿ ಆದ್ಯತೆ ಮೇಲೆ ಈಡೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ಸಿ.ಎಸ್.ಸೋಲ್ಲಾಪುರ, ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ರಾಜ್ಯ ಕಾರ್ಯದರ್ಶಿ ಬಸವರಾಜ ಭಜಂತ್ರಿ, ಪ್ರಶಾಂತ ಕಾಳೆ, ಅರವಿಂದ ಕಾಶಿನಕುಂಟಿ, ಪ್ರಭುಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.
ಎಂ.ಬಿ.ಎಲ್-೨೨-೫
ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷ ಶಂಕರ ಹೆಬ್ಬಾಳ,ಪ್ರಧಾನ ಕಾರ್ಯದರ್ಶಿ ಗುಲಾಮಮೊಹ್ಮದ್ ದಫೇದಾರ ಅವರು ಬಜೆಟ್ ಅಧಿವೇಶನದಲ್ಲಿ ಪತ್ರಕರ್ತರ ಬೇಡಿಕೆಗಳ ಕುರಿತು ಧ್ವನಿ ಎತ್ತುವಂತೆ ಒತ್ತಾಯಿಸಿ ಮನವಿಪತ್ರ ಸಲ್ಲಿಸಿದರು.