13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ
ಬೆಳಗಾವಿ: “ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದಲ್ಲಿ ಮಾತ್ರ ವೃತ್ತಿಪರತೆ ಹೆಚ್ಚುತ್ತದೆ. ಜೊತೆಗೆ ತಮ್ಮ ವೃತ್ತಿಯಲ್ಲಿ ತಾಳ್ಮೆ ಮತ್ತು ಸಹನೆ ಬಹುಮುಖ್ಯ. ಉದಯೋನ್ಮುಖ ವಕೀಲರು ಕಾನೂನಿನ ಜೊತೆಗೆ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳುವುದರಿಂದ ಶ್ರೇಷ್ಠ ವಕೀಲರಾಗಬಹುದು” ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ. ಎಸ್. ಪಾಶ್ಚಾಪುರೆ ಸಲಹೆ ನೀಡಿದರು.
ನಗರದ ಕೆ. ಎಲ್. ಎಸ್ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಕೆ. ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೆ. ಎಲ್. ಎಸ್ ಕಾರ್ಯದರ್ಶಿ ವಿ. ಜಿ. ಕುಲಕರ್ಣಿ, ಸಮಾಜದಲ್ಲಿ ಯಾವುದೇ ಹುದ್ದೆಗಳನ್ನು ನಿರ್ವಹಿಸಿದರೂ ಸಿಗದಂತಹ ಪ್ರೀತಿ, ವಿಶ್ವಾಸ ವಕೀಲ ವೃತ್ತಿಯಲ್ಲಿ ಸಿಗುತ್ತದೆ. ವಕೀಲರ ಹೆಚ್ಚು ಹೆಚ್ಚು ಕಾನೂನನ್ನು ತಿಳಿದುಕೊಂಡರೆ ಒಳ್ಳೆಯ ವಕೀಲರಾಗಲು ಸಾಧ್ಯ. ಹಣದ ಹಿಂದೆ ಓಡುವ ಬದಲು ಜ್ಞಾನದ ಹಿಂದೆ ಹೋದರೆ ತಾನಾಗಿಯೇ ಹಣ ನಮ್ಮ ಬಳಿ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಅಣಕು ನ್ಯಾಯಾಲಯ ಸ್ಪರ್ಧೆ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ನ್ಯಾಯಾಧೀಶರಾಗಿ ಹಾಗೂ ಉತ್ತಮ ನ್ಯಾಯವಾದಿಗಳಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ. ಕಾನೂನು ವೃತ್ತಿಯಲ್ಲಿ ತಾಳ್ಮೆ ಬಹುಮುಖ್ಯ. ತನ್ಮೂಲಕ ಸಮಾಜದಲ್ಲಿನ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತೀರಿ ಎಂಬುದನ್ನು ಕಲಿಯಬಹುದು. ವಕೀಲರಾಗಿ ಜನಪರ ಸೇವೆ ಸಲ್ಲಿಸಲು ಅಣಿಯಾಗಬೇಕು. ಎಂದು ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಎಂ. ಆರ್ ಕುಲಕರ್ಣಿ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಸ್ಪರ್ಧೆಯ ಪ್ರಾಯೋಜಕ ಹಾಗೂ ಭಾರತದ ನಿವೃತ್ತ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರ ಕಾರ್ಯಕ್ಷಮತೆಯನ್ನು ಸ್ಮರಿಸುತ್ತಾ, ಅವರು ಇಳಿ ವಯಸ್ಸಿನಲ್ಲೂ ತೋರುವ ಉತ್ಸಾಹವನ್ನು ಉದಾಹರಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಎ. ಎಚ್ ಹವಲ್ದಾರ್ ಕಾರ್ಯಕ್ರಮವನ್ನು ಸ್ವಾಗತಿಸಿ, ಆರ್. ಎಲ್ ಕಾನೂನು ಮಹಾವಿದ್ಯಾಲಯ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸರ್ವಾಂಗೀಣ ಸಮಗ್ರತೆಯನ್ನು ಕಾಯ್ದುಕೊಂಡಿದೆ ಎಂದು ಸಭಿಕರಿಗೆ ಕಾಲೇಜನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಲ್.ಎಸ್ ಸದಸ್ಯ ಆರ್. ಎಸ್. ಮುತಾಲಿಕ್, ಸ್ಪರ್ಧೆಯ ಸಂಯೋಜಕಿ ಅಶ್ವಿನಿ ಪರಬ್, ವಿದ್ಯಾರ್ಥಿ ಪ್ರತಿನಿಧಿಗಳಾದ ಕ್ಷಮಾ ಭಟ್, ತೇಜಸ್ವಿನಿ ಸಂಶೋಳೆ, ಸೌಮ್ಯ ಶೆಟ್ಟಿ, ಹಾಗೂ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.