ಆರೋಗ್ಯವಂಥ ಸಮಾಜಕ್ಕೆ ರಕ್ತದಾನ ಅವಶ್ಯಕ : ಕುಲಸಚಿವೆ ಕೆ. ಟಿ. ಶಾಂತಲಾ
ಯುವ ಭಾರತ ಸುದ್ದಿ ಬೆಳಗಾವಿ :
ತುರ್ತು ಸಂದರ್ಭದಲ್ಲಿ ರೋಗಿ ತನ್ನ ರಕ್ತದ ಗುಂಪು ಸಿಗದೇ ಸಾಯುವುದನ್ನು ಕಾಣುತ್ತೇವೆ. ರಕ್ತದ ಮಹತ್ವದ ಕುರಿತು ಸಮಾಜದಲ್ಲಿ ಅಷ್ಟಾಗಿ ತಿಳಿವಳಿಕೆಯಿಲ್ಲ. ವಿದ್ಯಾರ್ಥಿಗಳು ರಕ್ತದಾನದ ಕುರಿತು ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವೆ ಕೆ.ಟಿ. ಶಾಂತಲಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯುವ ರೆಡ್ ಕ್ರಾಸ್ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಯೂತ್ ರೆಡ್ ಕ್ರಾಸ್ ಗಳ ವತಿಯಿಂದ ಮಹಾವಿದ್ಯಾಲಯದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಗತ್ತು ವೈಜ್ಞಾನಿಕವಾಗಿ ಬಹಳಷ್ಟು ಮುಂದುವರಿದಿದೆ. ಆದರೆ, ರಕ್ತವನ್ನು ಮನುಷ್ಯನಿಂದ ಮನುಷ್ಯನು ಪಡೆದುಕೊಳ್ಳಬೇಕು. ರಕ್ತದಾನ ಮಾಡುವುದು ಇನ್ನೊಬ್ಬರ ಜೀವ ಉಳಿಸುವ ಉದಾತ್ತ ಕಾರ್ಯವಾಗಿದೆ. ಇನ್ನೊಬ್ಬರ ಜೀವವನ್ನು ಉಳಿಸಿದ ತೃಪ್ತಭಾವವೂ ರಕ್ತದಾನಿಗಿರುತ್ತದೆ. ಆದ್ದರಿಂದ ಆರೋಗ್ಯವಂಥ ಸಮಾಜಕ್ಕೆ ರಕ್ತದಾನ ತುಂಬಾ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ರಕ್ತದಾನದಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಯಾಗೊಳಿಸಬೇಕು ಎಂದರು.
ರಾಚವಿಯ ಯೂತ್ ರೆಡ್ ಕ್ರಾಸ್ ದ ನೋಡಲ್ ಅಧಿಕಾರಿ ಡಾ. ಸುಮಂತ ಹಿರೇಮಠ ಮಾತನಾಡಿ, ರಕ್ತದಾನ ರೆಡ್ ಕ್ರಾಸ್ ಸಂಸ್ಥೆಯ ಸಾಮಾಜಿಕ ಸೇವೆಗಳಲ್ಲಿ ಒಂದಾಗಿದೆ. ರಕ್ತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೆಂದು ಭಾವಿಸಬೇಕು. ತನ್ನ ರಕ್ತದಿಂದ ಇನ್ನೊಬ್ಬರ ಜೀವ ಉಳಿಸುತ್ತಿದ್ದೇನೆ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತಿರಬೇಕು ಎಂದರು.
ಬೆಳಗಾವಿಯ ಶ್ರೀ ಸಾಯಿ ರಕ್ತ ಭಂಡಾರದ ತಾಂತ್ರಿಕ ಮೇಲ್ವಿಚಾರಕ ಕಿರಣ ಜೋತಾವರ್ ಮಾತನಾಡಿ, ರಕ್ತದಾನ ಮಾಡುವುದರಿಂದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಆರೋಗ್ಯವು ಸುಧಾರಣೆಯಾಗುತ್ತದೆ. ರಕ್ತದ ಮಹತ್ವ, ಅದರ ಗುಂಪುಗಳು ಮತ್ತು ಹಿಮೋಗ್ಲೋಬಿನ್ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಶಂಕರ ತೇರದಾಳ ಮಾತನಾಡಿ, ನಮ್ಮ ಸಮಾಜದಲ್ಲಿ ಅನ್ನದಾನ, ವಸ್ತ್ರದಾನ, ವಿದ್ಯಾದಾನ ಹೀಗೆ ಅನೇಕ ದಾನಗಳಿವೆ. ಆದರೆ, ವ್ಯಕ್ತಿ ಬದುಕಿದ್ದಾಗ ಈ ಎಲ್ಲಾ ದಾನಿಗಳಿಗೆ ಮಹತ್ವ ಬರುತ್ತದೆ. ವ್ಯಕ್ತಿ ಬದುಕಲು ಪ್ರಮುಖವಾಗಿ ಬೇಕಾದುದು ರಕ್ತ. ಸಮಾಜದಲ್ಲಿ ಪ್ರತಿಯೊಬ್ಬರೂ ರಕ್ತದಾನ ಮಾಡುತ್ತೇನೆ ಎಂದು ಪ್ರತಿಜ್ಞೆ ಗೈಯ್ಯಬೇಕು ಎಂದರು.
ಮಹಾವಿದ್ಯಾಲಯದ ಅರುವತ್ತು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ರಕ್ತದಾನ ಮಾಡಿದರು.
ವಿದ್ಯಾರ್ಥಿ ದೀಪಕ ಪಾಟೀಲ ನಿರೂಪಿಸಿದರು. ಮಹಾವಿದ್ಯಾಲಯದ ಯೂತ್ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಬಾಲಾಜಿ ಆಳಂದೆ ಸ್ವಾಗತಿಸಿದರು. ವಿದ್ಯಾರ್ಥಿ ಕಾವ್ಯಾಂಜಲಿ ಸೊಂಟನ್ನವರ್ ಪ್ರಾರ್ಥಿಸಿದರು. ಡಾ. ಅರ್ಜುನ್ ಜಂಬಗಿ ವಂದಿಸಿದರು. ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.