Breaking News

ಮುಗಿದ ಅಧಿವೇಶನ : ಗಡಿ ಹೊತ್ತಿ ಉರಿದರೂ ಮೌನಿಯಾದ ಕರ್ನಾಟಕ !

Spread the love

ಮುಗಿದ ಅಧಿವೇಶನ : ಗಡಿ ಹೊತ್ತಿ ಉರಿದರೂ ಮೌನಿಯಾದ ಕರ್ನಾಟಕ !

ಯುವ ಭಾರತ ಸುದ್ದಿ ಬೆಳಗಾವಿ :
ಸುದೀರ್ಘ ಕಾಲದಿಂದ ಬಗೆಹರಿಯದೆ ಇರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇದೀಗ ಸುಪ್ರೀಂ ಕೋರ್ಟ್ ವಿಚಾರಣೆಯ ಹಂತದಲ್ಲಿದೆ. ಆದರೂ ಕಾಲ ಕಾಲಕ್ಕೆ ತಗಾದೆ ತೆಗೆಯುತ್ತ ಬಂದಿರುವ ಮಹಾರಾಷ್ಟ್ರ ಸುಮ್ಮನೆ ಕುಳಿತಿಲ್ಲ. ದಿನಕ್ಕೊಂದು ಕ್ಯಾತೆ ತೆಗೆಯುತ್ತಲೇ ಬರುತ್ತಿದೆ. ಈ ನಡುವೆ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ವಿಶೇಷ ಅಧಿವೇಶನ ಬೆಳಗಾವಿಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಕರ್ನಾಟಕದ ವಿರುದ್ಧ ಸೆಟೆದು ನಿಂತು ದಿನಕ್ಕೊಂದು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದರೂ ಕರ್ನಾಟಕದ ಆಡಳಿತ ಮಾತ್ರ ತನಗೂ ವಿವಾದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ನಡೆದುಕೊಂಡಿರುವುದು ಮಾತ್ರ ದುರ್ದೈವ ಎನ್ನುವುದು ಬೆಳಗಾವಿ ಕನ್ನಡಿಗರ ಅಳಲಾಗಿದೆ.

ಮತ್ತೊಂದು ವಿಧಾನ ಮಂಡಲದ ಅಧಿವೇಶನ ಸಮಾಪ್ತಿ ಕಂಡಿದೆ. ಬೆಳಗಾವಿಗಾಗಿ ಇಡೀ ಮಹಾರಾಷ್ಟ್ರ ಈ ಬಾರಿ ಒಗ್ಗಟ್ಟು ಪ್ರದರ್ಶಿಸಿದ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನ ನಡೆಯುತ್ತಿದ್ದರೂ ಕರ್ನಾಟಕದ ಜನಪ್ರತಿನಿಧಿಗಳು ಮಾತ್ರ ಮಹಾ ಮೌನಿಗಳಾಗಿರುವುದು ಇಲ್ಲಿನ ಕನ್ನಡಿಗರಿಗೆ ನೋವು ತಂದಿದೆ.
ಮಹಾರಾಷ್ಟ್ರ ಈಗಾಗಲೇ ಕೇಂದ್ರ ಸರಕಾರದ ಬಳಿ ವಿವಾದವನ್ನು ತೆಗೆದುಕೊಂಡು ಹೋಗಿ ಆ ಪ್ರಯತ್ನದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಂಡುಕೊಂಡಿದೆ. ಕೇಂದ್ರ ಗೃಹ ಸಚಿವರು ಈಗಾಗಲೇ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಶಾಂತಿ ಕಾಪಾಡುವ ಫರ್ಮಾನ್ ಹೊರಡಿಸಿದ್ದಾರೆ. ಇದು ಮಹಾರಾಷ್ಟ್ರ ತನ್ನ ಪಾಲಿಗೆ ದೊರೆತ ಮೊದಲ ಜಯ ಎಂದೇ ಭಾವಿಸಿದೆ. ಇದರ ಬೆನ್ನಲ್ಲೇ ಬೆಳಗಾವಿ ಅಧಿವೇಶನ ಆರಂಭವಾದರೂ ಕರ್ನಾಟಕ ಸರಕಾರ ಮತ್ತು ಕನ್ನಡ ಜನಪ್ರತಿನಿಧಿಗಳು ಮಹಾರಾಷ್ಟ್ರದ ಧೋರಣೆಗೆ ಮೇಲ್ನೋಟಕ್ಕಷ್ಟೇ ಆಕ್ಷೇಪಿಸಿರುವುದು ಬೆಳಗಾವಿಯ ಕನ್ನಡಿಗರ ಭಯಕ್ಕೆ ಕಾರಣವಾಗಿದೆ.

ಕರ್ನಾಟಕ ಸರಕಾರ ಬೆಳಗಾವಿಗಾಗಿ ಒಂದಾಗಿ ನಿಂತು ಬಲವಾದ ಸಂದೇಶ ರವಾನಿಸಬೇಕಿತ್ತು ಎಂಬ ಒತ್ತಾಯ ಇದೀಗ ಕನ್ನಡಿಗರಿಂದ ಕೇಳಿ ಬಂದಿದೆ.

ಬೆಳಗಾವಿಯಲ್ಲಿಂದು ಈ ವರ್ಷದ ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನ ಮುಕ್ತಾಯಗೊಂಡಿದೆ. ಒಟ್ಟಾರೆ, ಬೆಳಗಾವಿ ಅಧಿವೇಶನ ಗಮನಿಸಿದರೆ ಇದೊಂದು ಕಾಟಾಚಾರದ ಅಧಿವೇಶದಂತೆ ನಡೆದಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಜಿಲ್ಲಾ ಪಂಚಾಯಿತಿ ಸಭೆಯಂತೆ ನಡೆದಿದೆ ಎಂದು ಬೆಳಗಾವಿಯ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತ-ವಿರೋಧ ಪಕ್ಷಗಳ ನಾಯಕರು ಹಾಗೂ ಶಾಸಕರು ಅಧಿವೇಶನ ಯಶಸ್ಸಿಗೆ ಸ್ವಲ್ಪವೂ ಕಾಳಜಿ ತೋರಿಸಿಲ್ಲ ಎಂದು ಜನಪ್ರತಿನಿಧಿಗಳ ನಡೆಗೆ ಹರಿಹಾಯ್ದಿದ್ದಾರೆ. ಈ ಬಾರಿಯ ಅಧಿವೇಶನ ಯಾವುದೇ ಅಬ್ಬರ ಕಾಣದೆ ನೀರಸವಾಗಿ ಸಮಾಪ್ತಿಗೊಂಡಿರುವುದು ಇಲ್ಲಿನ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ವಿಧಾನಸಭೆಯ ಅಧಿವೇಶನಗಳು ಏಕಕಾಲಕ್ಕೆ ಅಂದರೆ ಡಿಸೆಂಬರ್ 19 ಕ್ಕೆ ಆರಂಭವಾಗಿದೆ. ಇದೇ ಹೊತ್ತಿಗೆ ಈ ಸಲ ಉಭಯ ರಾಜ್ಯಗಳಲ್ಲಿ ಗಡಿ ಹೊತ್ತಿ ಉರಿದಿದೆ.

ಕರ್ನಾಟಕ ಸರಕಾರ ಬೆಳಗಾವಿಯಲ್ಲಿ ಹಾಗೂ ಮಹಾರಾಷ್ಟ್ರ ಸರಕಾರ ನಾಗಪುರದಲ್ಲಿ ಚಳಿಗಾಲದ ವಿಶೇಷ ಅಧಿವೇಶನವನ್ನು ನಡೆಸಿದವು. ಆದರೆ, ಮಹಾರಾಷ್ಟ್ರ ಗಡಿ ವಿವಾದವನ್ನು ವ್ಯಾಪಕ ಪ್ರಮಾಣದಲ್ಲಿ ಲಾಭ ಮಾಡಿಕೊಂಡಿತು. ಉಭಯ ರಾಜ್ಯಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಕಾವೇರಿದ್ದ ವಿವಾದವನ್ನು ಮಹಾರಾಷ್ಟ್ರ ಈ ಬಾರಿ ತನಗೆ ಬೇಕಾದಂತೆ ಅತ್ಯಂತ ಅನುಕೂಲಕರವನ್ನಾಗಿಸಿ ಕೊಂಡಿತು.

ನಾಗಪುರದಲ್ಲಿ ಕುಳಿತುಕೊಂಡು ಮರಾಠಿಗರ ಒಗ್ಗಟ್ಟು ಕಾಯ್ದುಕೊಂಡಿದ್ದಲ್ಲದೆ ಒಟ್ಟಾರೆ ಇಡೀ ಮಹಾರಾಷ್ಟ್ರ ಹಾಗೂ ಮರಾಠಿಗರು ಕರ್ನಾಟಕದ ವಿರುದ್ಧ ಸಿಡಿದೇಳುವಂತೆ ಅಧಿವೇಶನವನ್ನು ಬಳಕೆ ಮಾಡಿಕೊಂಡಿತು. ಆದರೆ, ಕರ್ನಾಟಕದ ಜನಪ್ರತಿನಿಧಿಗಳು ಮಾತ್ರ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ನಾಡ ಅಭಿಮಾನ ಮತ್ತು ಭಾಷಾಭಿಮಾನ ತೋರದೆ ಇರುವುದಕ್ಕೆ ಕನ್ನಡಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ. ಆದರೆ, ಮಹಾರಾಷ್ಟ್ರಕ್ಕೆ ಈ ಬಗ್ಗೆ ನ್ಯಾಯ ಸಿಗುವ ಖಚಿತತೆ ಇಲ್ಲ. ಒಂದು ಕಡೆ ನ್ಯಾಯಾಲಯದ ಮೆಟ್ಟಿಲೇರಿರುವ ಮಹಾರಾಷ್ಟ್ರ ಮತ್ತೊಂದು ಕಡೆ ಸಂಸತ್ ಕಡೆ ಮುಖ ಮಾಡಿದೆ. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಯಬಹುದು ಎಂಬ ಆಶಾಭಾವ ವ್ಯಕ್ತಪಡಿಸುತ್ತಿದೆ. ಏಕಕಾಲಕ್ಕೆ ಮಹಾರಾಷ್ಟ್ರ ಎರಡು ದೋಣಿಗಳಲ್ಲಿ ಕಾಲಿಟ್ಟಿದೆ. ಅದಕ್ಕೆ ತಕ್ಕಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಸ್ಥಿಕೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ನಡೆಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ಪ್ರಕ್ರಿಯೆಯಾಗಿ ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಕರ್ನಾಟಕದ ಕಾಲು ಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿರ್ಣಯವನ್ನು ಒಮ್ಮತದಿಂದ ಸ್ವೀಕರಿಸಿದೆ. ಆದರೆ ಕರ್ನಾಟಕ ತನ್ನ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ ಎಂಬ ಠರಾವ್ ಅಂಗೀಕರಿಸಿ ಸುಮ್ಮನೆ ಕುಳಿತಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಕಟ್ಟೆ ಏರಿದ್ದ ಗಡಿ ವಿವಾದ ಸಂದರ್ಭದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕೇಂದ್ರ ಮತ್ತು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡುವಲ್ಲಿ ಯಶಸ್ವಿಯಾಗಿದ್ದರು. ಕೇಂದ್ರ ಸರಕಾರ ಗಡಿ ವಿವಾದದ ಸಂಬಂಧ ಕರ್ನಾಟಕದ ವಿರುದ್ಧವಾಗಿ ಅಫಿಡವಿಟ್ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಇದಕ್ಕೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ನೇತೃತ್ವದ ಸಮ್ಮಿಶ್ರ ಸರಕಾರಗಳು ಆಕ್ಷೇಪಿಸಿ ಕೇಂದ್ರ ಮತ್ತು ಮಹಾರಾಷ್ಟ್ರಕ್ಕೆ ಸಡ್ಡು ಹೊಡೆದವು. ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಯಾವೊಂದು ಸುಳಿವು ನೀಡದೆ ಏಕಾಏಕಿ ಬೆಳಗಾವಿಯಲ್ಲಿ ವಿಧಾನ ಮಂಡಲಗಳ ಅಧಿವೇಶನವನ್ನು ನಡೆಸುವ ಅತ್ಯಂತ ಮಹತ್ವದ ತೀರ್ಮಾನವನ್ನು ತೆಗೆದುಕೊಂಡು ಇತಿಹಾಸ ನಿರ್ಮಿಸಿತು. ಸಮ್ಮಿಶ್ರ ಸರ್ಕಾರ ತೆಗೆದುಕೊಂಡ ಈ ನಿರ್ಧಾರದಿಂದ ಮಹಾರಾಷ್ಟ್ರ ತೀರಾ ಕೆಟ್ಟದಾಗಿ ವಿಚಲಿತಗೊಂಡಿತು. ಸಮ್ಮಿಶ್ರ ಸರಕಾರ ಅಧಿವೇಶನಕ್ಕೆ ಕೆಎಲ್ಇ ಸಂಸ್ಥೆಯ ಸಭಾಗ್ರಹವನ್ನು ಉಪಯೋಗಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಅಧಿವೇಶನವನ್ನು ನಡೆಸಿತು. ನಂತರದ ದಿನಗಳಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ವಿಶೇಷ ಅಧಿವೇಶನ ನಡೆಯಲು ಪೂರಕವಾಗುವಂತೆ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. 400 ಕೋಟಿ ವೆಚ್ಚದಲ್ಲಿ ಅತ್ಯಂತ ವ್ಯವಸ್ಥಿತ ಹಾಗೂ ಸುಂದರ ಸುವರ್ಣ ವಿಧಾನ ಸೌಧವನ್ನು ನಿರ್ಮಿಸಿ ಇತಿಹಾಸ ಬರೆಯಲಾಯಿತು. ಮಾತ್ರವಲ್ಲ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಸೇರಿದಂತೆ ಮಹತ್ವದ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ತಂದು ಮಹಾರಾಷ್ಟ್ರದ ಬಾಯಿ ಮುಚ್ಚಿಸಲಾಯಿತು. ಆದರೆ ಈಗಿನ ಸರಕಾರ ನಡೆದುಕೊಂಡಿರುವ ಧೋರಣೆ ಬೆಳಗಾವಿಯ ಕನ್ನಡ ಜನತೆಗೆ ಮಾತ್ರ ಮಾರಕವಾದಂತಿದೆ. ಈ ಬಾರಿ ಕರ್ನಾಟಕ ಸರಕಾರ ಪ್ರತಿಪಕ್ಷಗಳ ಬೆಂಬಲ ಪಡೆದು ಅಧಿವೇಶವವನ್ನು ಒಂದು ದಿನ ಮೊದಲೇ ಮೊಟಕು ಮಾಡುವಲ್ಲಿ ಯಶಸ್ವಿಯಾಯಿತು. ಕೊರೊನಾ ನೆಪವೊಡ್ಡಿ ಅಧಿವೇಶನವನ್ನು ಸಮಾಪ್ತಿಗೊಳಿಸಲಾಗಿದೆ. ರಾಜಕೀಯ ಸಮಾವೇಶಗಳು, ಜನ ಜಾತ್ರೆ ಮುಂತಾದವುಗಳನ್ನು ನಡೆಸಲು ರಾಜಕೀಯ ನಾಯಕರಿಗೆ ಯಾವುದೇ ಸಮಸ್ಯೆ ಆಗದು. ಆದರೆ ಬೆಳಗಾವಿಯಂತಹ ಸಮಸ್ಯೆ ಜ್ವಲಂತವಾಗಿ ಉರಿಯುತ್ತಿದೆ, ಹಿಂದೆಂದಿಗಿಂತ ದೊಡ್ಡ ಪ್ರಮಾಣದಲ್ಲಿ ಗಡಿಗೆ ಬೆಂಕಿ ಹತ್ತಿಕೊಂಡಿದೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಈ ನೆಲವನ್ನು ಉಳಿಸಿಕೊಳ್ಳುವ ಬಗ್ಗೆ ಸ್ವಲ್ಪವೂ ಚರ್ಚಿಸದೆ ಕೇವಲ ಕಾಟಾಚಾರಕ್ಕೆ ಮಾತ್ರ ಅಧಿವೇಶನ ನಡೆಸಿರುವುದು ಈ ಬಾರಿ ಕನ್ನಡಿಗರ ಮನದಲ್ಲಿ ಬಿಜೆಪಿ ಸರಕಾರದ ಬಗ್ಗೆ ಅಸಹನೆಗೆ ಕಾರಣವಾಗಿದೆ. ಜೊತೆಗೆ ಬಿಜೆಪಿಗೆ ಸಾಥ್ ನೀಡಿದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಡೆಯು ಸಹ ಟೀಕೆಗೆ ಗುರಿಯಾಗಿದೆ.
ಸದನಕ್ಕೆ ಬಂದರೆ ಮಾತ್ರ ಜನಪ್ರತಿನಿಧಿಗಳಿಗೆ ಕೊರೊನಾ ಬರುತ್ತದಾ ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಬೆಳಗಾವಿ ಗಡಿ ಹೊತ್ತಿ ಉರಿಯುವ ಸಂದರ್ಭದಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಬೇಕಾದ ಕನ್ನಡನಾಡಿನ ಜನಪ್ರತಿನಿಧಿಗಳ ನಿಲುವು ಪ್ರಶ್ನಿಸುವಂತಾಗಿದೆ. ಕರ್ನಾಟಕದ ವಿರುದ್ಧ ಇಡೀ ಮಹಾರಾಷ್ಟ್ರ ಇದೇ ಮೊದಲ ಬಾರಿಗೆ ಒಗ್ಗಟ್ಟಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಮಹಾರಾಷ್ಟ್ರದ ರಾಜಕೀಯ ನಾಯಕರು ಕರ್ನಾಟಕದ ವಿರುದ್ಧ ಪ್ರತಿದಿನ ವಾಗ್ದಾಳಿಗೆ ಮೇಲಾಟ ನಡೆಸುತ್ತಿದ್ದಾರೆ. ಕರ್ನಾಟಕದ ಯಾವೊಬ್ಬ ಜನಪ್ರತಿನಿಧಿಯು ಸಹ ಬೆಳಗಾವಿ ಗಡಿ ವಿಷಯದ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಇದು ನಮ್ಮ ಜನಪ್ರತಿನಿಧಿಗಳ ನಾಡ ಅಭಿಮಾನದ ನಿರಾಸಕ್ತಿಯ ನಿದರ್ಶನ ಎನ್ನಬಹುದು.

ಗಡಿಭಾಗ ಹೊತ್ತಿ ಉರಿಯುತ್ತಿರುವಾಗ ವಿಧಾನಮಂಡಲದ ಅಧಿವೇಶನವನ್ನು ಜಿಲ್ಲಾ ಪಂಚಾಯಿತಿ ಸಭೆಯಂತೆ ಮುಗಿಸಿ ಹೋಗುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಕನ್ನಡಿಗರು ಸರಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಸಭೆಯಾದರೂ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತದೆ. ತಮ್ಮ ಊರಲ್ಲಿ ರಸ್ತೆ ಇಲ್ಲ, ನೀರಿಲ್ಲ ಎಂದು ಸದಸ್ಯರು ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾರೆ. ಜಿಲ್ಲಾ ಪಂಚಾಯಿತಿ ಸಭೆ ತುಂಬಿ ತುಳುಕುತ್ತದೆ. ಆದರೆ, ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ವರ್ಷ ಸದಸ್ಯರ ಗೈರುಹಾಜರಿ ಎದ್ದು ಕಾಣುತ್ತಿದೆ. ಇದು ಕರ್ನಾಟಕ ಜನತೆಯ ದೊಡ್ಡ ದುರ್ದೈವ. ಮಹಾರಾಷ್ಟ್ರ ಇದೀಗ ಕೇಂದ್ರ ಹಾಗೂ ನ್ಯಾಯಾಲಯದ ಕಟ್ಟೆ ಹತ್ತಿ ಬೆಳಗಾವಿಯನ್ನು ಹೇಗಾದರೂ ಮಾಡಿ ಮಹಾರಾಷ್ಟ್ರಕ್ಕೆ ಸೇರಿಸಲು ಪ್ರಯಾಸ ಪಡುತ್ತಿದೆ. ಈ ಭಾಗವನ್ನು ತನ್ನ ರಾಜ್ಯಕ್ಕೆ ಸೇರಿಸಲು ಇಲ್ಲದ ವ್ಯರ್ಥ ಸಾಹಸ ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ಮಾತ್ರ ತನಗೆ ಇದು ಯಾವುದೇ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಕರ್ನಾಟಕ ಜನಪ್ರತಿನಿಧಿಗಳ ಅಭಿಮಾನ ಎಂತಹ ನಾಚಿಕೆಗೇಡಿತದ್ದು.

ಗಡಿ ಹೊತ್ತಿ ಉರಿಯುವಾಗ ತಮಗೆ ಆದರಿಂದ ಯಾವ ಸಂಬಂಧ ಇಲ್ಲ ಎಂದು ತೆಪ್ಪಗೆ ಮಲಗಿಕೊಂಡಿರುವ ಅನುಭವ ಈ ಬಾರಿ ಆಗಿದೆ ಎನ್ನುವುದು ಕನ್ನಡಿಗರ ದೂರು. ಬೆಳಗಾವಿ ವಿವಾದ ತಾರಕಕ್ಕೇರಿರುವ ಈ ಸಂದರ್ಭದಲ್ಲಿ ಶಾಸಕರು ಹಾಗೂ ಸಚಿವರು ತಮ್ಮ ಕುಟುಂಬವನ್ನು ಮರೆತು ಬೆಳಗಾವಿಗೆ ಬಂದು ದೊಡ್ಡ ಧ್ವನಿಯಲ್ಲಿ ಮಹಾರಾಷ್ಟ್ರದ ಧೋರಣೆ ವಿರುದ್ಧ ಮಾತನಾಡಬೇಕಾಗಿತ್ತು. ಆದರೆ, ಎಲ್ಲರೂ ಬಾಯಿ ಮುಚ್ಚಿಕೊಂಡು ಮೌನವಾಗಿದ್ದಾರೆ.

ಬೆಳಗಾವಿ ಪ್ರಾಚೀನ ಕಾಲದಿಂದಲೂ ಕರ್ನಾಟಕದ ಸ್ವತ್ತು. ಯಾವುದೇ ಕಾರಣಕ್ಕೂ ಅದನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಬಲವಾದ ಸಂದೇಶ ರವಾನಿಸಬೇಕಾಗಿತ್ತು. ಬೆಳಗಾವಿಗಾಗಿ ಮಹಾರಾಷ್ಟ್ರಿಗರು
ಮಾತನಾಡಿದರೆ ಕನ್ನಡಿಗರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಬೇಕಾಗಿತ್ತು. ಪ್ರತಿಯೊಬ್ಬ ಸದಸ್ಯರು ಹಾಗೂ ಸಚಿವರು ಮಹಾರಾಷ್ಟ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಬುದ್ಧಿ ಕಲಿಸಬೇಕಾಗಿತ್ತು. ಆದರೆ ಯಾರೊಬ್ಬರೂ ಚಕಾರವನ್ನೇ ತೆಗೆಯುತ್ತಿಲ್ಲ. ನಾಡು-ನುಡಿಗಾಗಿ ಬೆಳಗಾವಿ ಅಧಿವೇಶನ ನಡೆದರೂ ಮಾತನಾಡದ ಕರ್ನಾಟಕ ಸರಕಾರದ ನಿರ್ಲಕ್ಷ ಧೋರಣೆ ಖಂಡನೀಯ. ಇಂತಹ ವ್ಯರ್ಥ ಅಧಿವೇಶನಕ್ಕೆ ನೂರಾರು ಕೋಟಿ ರೂಪಾಯಿ ಯಾಕೆ ಸುರಿಯಬೇಕಿತ್ತು ಎನ್ನುವುದು ಕನ್ನಡಿಗರ ಪ್ರಶ್ನೆಯಾಗಿದೆ.

ನಿಮಗೆ ಸದನಕ್ಕೆ ಬರಲು ಅಸಾಧ್ಯವಾದರೆ ಅಧಿವೇಶನವನ್ನು ಯಾಕಾದರೂ ನಡೆಸುತ್ತೀರಿ ?ಇಂತಹ ಬೇಜವಾಬ್ದಾರಿತನ ನಿಲುವು ಯಾಕೆ ?

ಮಹಾರಾಷ್ಟ್ರದಲ್ಲಿ ಗಡಿ ವಿವಾದ ಕಿಡಿ ದೊಡ್ಡದಾಗಿ ಹೊತ್ತಿ ಉರಿಯಲು ಕಾರಣವಾಗಿದೆ. ಅಲ್ಲಿನ ಪ್ರತಿಯೊಬ್ಬ ಸದಸ್ಯರು ಕರ್ನಾಟಕದ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಕಹಳೆ ಮೊಳಗಿಸಿದ್ದಾರೆ. ಆದರೆ ಕನ್ನಡದ ಜನ ಪ್ರತಿನಿಧಿಗಳು ಮಾತ್ರ ಎಂತಹ ನಿರಭಿಮಾನಿಗಳು ಎನ್ನುವುದಕ್ಕೆ ಬೆಳಗಾವಿಯ ಈ ಸಲದ ಅಧಿವೇಶನ ಅತ್ಯುತ್ತಮ ಉದಾಹರಣೆ ಎನ್ನಬಹುದು. ಶಾಸಕರೇ ಹಾಗೂ ಜನಪ್ರತಿನಿಧಿಗಳೇ ನಾಳೆ ಯಾರಾದರೂ ಬಂದು ನಿಮ್ಮ ಮನೆಯನ್ನು ಹೊತ್ತೊಯ್ದರೆ ನೀವು ಸುಮ್ಮನಿರುವಿರಾ ? ಬೆಳಗಾವಿಯ ಪರಿಸ್ಥಿತಿಯು ಹಾಗೆ. ಅದು ನಿಮ್ಮ ಮನೆಯಂತೆ. ಬೆಳಗಾವಿಗೆ ಈಗ ಇಂತಹ ಸಮಸ್ಯೆ ಬಂದಿರುವಾಗ ನೀವು ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಲಗಿದರೆ ಹೇಗೆ ? ಬೆಂಕಿ ನಿಮ್ಮ ಮನೆಯವರೆಗೂ ಬರುವರೆಗೂ ಕಾಯುವ ಅಗತ್ಯವಿಲ್ಲ. ಅದು ಸ್ವಲ್ಪವೇ ಕಾಲದಲ್ಲಿ ಬರುವ ಸಾಧ್ಯತೆ ಈ ಸಂದರ್ಭದಲ್ಲಿ ಕಂಡು ಬಂದಿದೆ. ಈಗ ಮಹಾರಾಷ್ಟ್ರಿಗರು ಕೇವಲ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಬಾಲ್ಕಿಯನ್ನು ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ದಾವಣಗೆರೆ, ಧಾರವಾಡ, ಚಿತ್ರದುರ್ಗವನ್ನು ಕೇಳಬಹುದು. ಶ್ರವಣಬೆಳಗೊಳದ ಅಜಾನುಬಾಹು ಬಾಹುಬಲಿಯ ಮೂರ್ತಿಯ ಕೆಳಗೆ ಬರೆದಿರುವ ಲಿಪಿ ಮರಾಠಿ ಎಂದು ಪ್ರತಿಪಾದಿಸಿರುವ ಮರಾಠಿಗರು ಮುಂದೊಂದು ದಿನ ಶ್ರವಣಬೆಳದ ಬೆಳಗೊಳದ ಬಗ್ಗೆಯೂ ತಮ್ಮಹಕ್ಕನ್ನು ಮಂಡಿಸಬಹುದು.

ಕನ್ನಡ ನಾಡಿನ ಜನಪ್ರತಿನಿಧಿಗಳೇ. ನಿಮಗೆ ಬೆಂಗಳೂರು ಹಾಗೂ ಮೈಸೂರು ಮಾತ್ರ ಕರ್ನಾಟಕವೇ ? ಬೆಳಗಾವಿ ಕನ್ನಡ ನಾಡಿನಲ್ಲಿ ಇಲ್ಲವೇ ?ದಕ್ಷಿಣ ಕರ್ನಾಟಕದ ಅತ್ಯಂತ ದೊಡ್ಡ ಸಮಸ್ಯೆ ಆಗಿರುವ ಕಾವೇರಿ ಜಲವಿವಾದ ಬಂದಾಗ ಇಡೀ ಕರ್ನಾಟಕ ಒಂದಾಗಿ ಬೆಂಬಲ ನೀಡುತ್ತದೆ. ಆದರೆ, ಬೆಳಗಾವಿ ಹಾಗೂ ಮಹದಾಯಿ ವಿವಾದ ಕಾಲಕ್ಕೆ ಯಾವ ರೀತಿಯಲ್ಲಿ ಬೆಂಬಲ ಕೊಟ್ಟಿದ್ದೀರಿ ? ಏನು ನಿಮ್ಮ ಕನ್ನಡ ಅಭಿಮಾನ. ಇಂತಹ ಕನ್ನಡ ಅಭಿಮಾನಕ್ಕೆ ಧಿಕ್ಕಾರವಿರಲಿ. ಇಂತಹ ಸಂದರ್ಭದಲ್ಲಿ ಇಡೀ ಕನ್ನಡಿಗರು ಮಹಾರಾಷ್ಟ್ರದ ವಿರುದ್ಧ ಒಂದಾಗಬೇಕಾಗಿತ್ತು. ಆದರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳಗಾವಿ ಬಗ್ಗೆ ಕಿಂಚಿತ್ ಮಾತನಾಡದ ಬೆಳಗಾವಿ ಅಧಿವೇಶನ ಒಟ್ಟಾರೆ ನಿರರ್ಥಕ ಅಧಿವೇಶನದಂತೆ ಭಾಸವಾಗಿದೆ ಎನ್ನುವುದು ಬೆಳಗಾವಿ ಕನ್ನಡಿಗರ ಒಟ್ಟಾರೆ ಅಭಿಪ್ರಾಯವಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fifteen + 14 =