ಗೋಕಾಕ : ರಾಜ್ಯದ ಸಮಗ್ರ ಅಭಿವೃದ್ಧಿಯ ಜೊತೆಗೆ ಜನತೆಯ ಮೂಲಭೂತ ಸೌಕರ್ಯಗಳನ್ನು ನೀಗಿಸಲು ಸರ್ಕಾರ ಸಂಕಲ್ಪ ತೊಟ್ಟಿದ್ದು, ಅಭಿವೃದ್ಧಿಯೊಂದೇ ನಮ್ಮ ಮುಂದಿರುವ ಗುರಿಯಾಗಿದೆ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಭಾನುವಾರದಂದು ತಾಲೂಕಿನ ದುರದುಂಡಿ ಗ್ರಾಮದಲ್ಲಿ ಆರ್‍ಡಿಪಿಆರ್, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3 ರಡಿ ಮಲ್ಲಾಪೂರ ಪಿಜಿ ಗ್ರಾಮದಿಂದ ಬಡಿಗವಾಡ ವ್ಹಾಯಾ ದುರದುಂಡಿ ರಸ್ತೆ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಎಲ್ಲ ವರ್ಗಗಳ ಹಿತ ರಕ್ಷಣೆ ನಮ್ಮ ಸರ್ಕಾರದಿಂದ ಮಾತ್ರ ಸಾಧ್ಯ. ಬಿಜೆಪಿಯು ಸಮಗ್ರ ಪ್ರಗತಿಯನ್ನು ಬಯಸಿದ್ದು, ಇದರ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಸರ್ವತೋಮುಖ ಏಳ್ಗೆಯ ಜೊತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಮಲ್ಲಾಪೂರ ಪಿಜಿ-ದುರದುಂಡಿ ರಸ್ತೆ ಕಾಮಗಾರಿಗೆ 6.20 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 7 ಸೇತುವೆಗಳು ಒಳಗೊಂಡಿದ್ದು, ಒಟ್ಟು 7.91 ಕಿ.ಮೀ ರಸ್ತೆಯ ಉದ್ದವಿದೆ. ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ನಿಗದಿತ ಅವಧಿಯೊಳಗೆ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಘಯೋಮನೀ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಜಿಲ್ಲಾ ಹಾಲು ಒಕ್ಕೂಟದ ನಾಮನಿರ್ದೇಶಿತ ಸದಸ್ಯ ರಾಮಣ್ಣಾ ಬಂಡಿ, ಎಪಿಎಂಸಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಜಿಪಂ ಸದಸ್ಯರಾದ ಟಿ.ಆರ್. ಕಾಗಲ, ಮಡ್ಡೆಪ್ಪ ತೋಳಿನವರ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮುಖಂಡ ಬಸವಂತ ಕಮತಿ, ಪ್ರಭಾಶುಗರ ನಿರ್ದೇಶಕರಾದ ಶಿವಲಿಂಗ ಪೂಜೇರಿ, ಲಕ್ಷ್ಮಣ ಗಣಪ್ಪಗೋಳ, ಮಾಳಪ್ಪ ಜಾಗನೂರ, ಶಿದ್ಲಿಂಗ ಕಂಬಳಿ, ಜಿಪಂ ಮಾಜಿ ಸದಸ್ಯ ಸುಧೀರ ಜೋಡಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಭೀಮಶಿ ಹುಕ್ಕೇರಿ, ಹೊನ್ನಜ್ಜ ಕೋಳಿ, ಡಾ:ಶಂಕರ ಗೋರಖನಾಥ, ಭೀಮಪ್ಪ ಅಂತರಗಟ್ಟಿ, ನಿಂಗಪ್ಪ ಮಾಳ್ಯಾಗೋಳ, ಸಣ್ಣಯಲ್ಲಪ್ಪ ಅಂತರಗಟ್ಟಿ, ದುಂಡಪ್ಪ ನಿಂಗನ್ನವರ, ಬಡಿಗವಾಡ ಗ್ರಾಮದ ಮುಖಂಡರಾದ ಕಲ್ಲಪ್ಪ ಚೌಕಾಶಿ, ಬಸು ಸನದಿ, ಶಂಕರ ಕಮತಿ, ಸಿದ್ದಪ್ಪ ಚೂಡಪ್ಪಗೋಳ, ಕೆಂಪಣ್ಣಾ ಚೌಕಾಶಿ, ಶಿವಾನಂದ ಚೌಕಾಶಿ, ಆರ್‍ಡಿಪಿಆರ್ ಚಿಕ್ಕೋಡಿ ಇಇ ಎ.ಬಿ. ಹೊನ್ನಾವರ, ಎಇಇ ಸಬರದ, ಗುತ್ತಿಗೆದಾರ ಬಿ.ಬಿ. ದಾಸನವರ, ಪಂಚಾಯತ ನೋಡಲ್ ಅಧಿಕಾರಿ ಎಂ.ಎಲ್. ಜನ್ಮಟ್ಟಿ, ಪಿಡಿಓ ಮನಗೂಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.