Breaking News

ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗದಲ್ಲಿ ಪಂಪ ಮಹಾಕವಿ ಪ್ರತಿಮೆ ಸ್ಥಾಪನೆ : ನಾಡೋಜ ಡಾ. ಮಹೇಶ ಜೋಶಿ

Spread the love

ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗದಲ್ಲಿ ಪಂಪ ಮಹಾಕವಿ ಪ್ರತಿಮೆ ಸ್ಥಾಪನೆ : ನಾಡೋಜ ಡಾ. ಮಹೇಶ ಜೋಶಿ

ಯುವ ಭಾರತ ಸುದ್ದಿ ಬೆಂಗಳೂರು:
ಮನುಷ್ಯಜಾತಿ ತಾನೊಂದೆ ವಲಂ ಎಂಬ ಘೋಷವಾಕ್ಯವನ್ನು ನೀಡುವ ಮೂಲಕ ಜಾತ್ಯಾತೀತ ವಿಚಾರವನ್ನು ಪ್ರಚುರಪಡಿಸಿದ್ದ ಕನ್ನಡದ ಆದಿಕವಿ, ಮಹಾ ಕವಿ ಪಂಪನ ಪುತ್ಥಳಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗದ ಆವರಣದ ಗೋಡೆಗೆ ತಗುಲಿಕೊಂಡಂತೆ ಪಂಪ ಮಹಾಕವಿ ರಸ್ತೆಯ ಪಕ್ಕದಲ್ಲಿ ಸ್ಥಾಪಿಸಲು ಹಾಗೂ ಪಂಪ ಮಹಾಕವಿ ರಸ್ತೆಯನ್ನು ವಿಶೇಷ ರಸ್ತೆ ಎಂದು ಪರಿಗಣಿಸಿ ಪ್ರೇಕ್ಷಣೀಯ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅನುಮತಿ ಕೇಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಚೇರಿಯ ಮುಂಭಾಗದಲ್ಲಿರುವ ಪಂಪ ಮಹಾಕವಿ ರಸ್ತೆಯಲ್ಲಿ ಆದಿಕವಿ ಪಂಪನ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಪಂಪಮಹಾಕವಿ ರಸ್ತೆಯನ್ನು ಕನ್ನಡ ಇತಿಹಾಸ ಸಾರುವ ರಸ್ತೆಯನ್ನಾಗಿಸಿ ಮೇಲು ದರ್ಜೆಗೆ ಏರಿಸಬೇಕೆಂದು ಪರಿಷತ್ತಿನ ಉದ್ದೇಶವಾಗಿದೆ. ಸಮಗ್ರ ಕನ್ನಡಿಗರ ಏಕಮಾತ್ರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಹಾಗೂ ಎಲ್ಲ ಸಂಘ-ಸಂಸ್ಥೆಗಳಿಗೆ ಮಾತೃಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗದಲ್ಲಿನ ಮಿಂಟೋ ಕಣ್ಣಿನ ಆಸ್ಪತ್ರೆಯಿಂದ ನ್ಯಾಷನಲ್ ಕಾಲೇಜು ರಸ್ತೆ ತುದಿಯವರೆಗೆ ಇರುವ ಪಂಪ ಮಹಾಕವಿ ರಸ್ತೆಯನ್ನು ಆಕರ್ಷಣೀಯವಾಗಿ ಆಧುನಿಕರಣಗೊಳಿಸಿ ಕನ್ನಡಮಯ ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸಬೇಕೆಂಬುದು ಪರಿಷತ್ತಿನ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್‌ ಅವರ ಬಳಿಯೂ ಚರ್ಚಿಸಲಾಗಿದೆ, ಈ ರಸ್ತೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸೌಂದರ್ಯೀಕರಣಗೊಳಿಸಿ, ಕನ್ನಡ ಗೀತೆಗಳು, ಕನ್ನಡದ ಸಂಗೀತವನ್ನು ಬಿತ್ತರಿಸುವ ವ್ಯವಸ್ಥೆ ಮಾಡುವುದರ ಜೊತೆಗೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಡಬೇಕೆಂದು ಕೋರಿ ದಿನಾಂಕ ೩-೬-೨೦೨೨ ರಲ್ಲಿ ಪತ್ರ ಬರೆಯಲಾಗಿದೆ. ಇದಾದ ನಂತರ ದಿನಾಂಕ ೧೪-೯-೨೦೨೨ ರಂದು ಎರಡನೆಯ ಪತ್ರವನ್ನು ನೀಡಲಾಗಿದ್ದು, ಪರಿಷತ್ತಿನ ಪತ್ರಕ್ಕೆ ಪಾಲಿಕೆಯ ಆಡಳಿತಗಾರರು ಮುಖ್ಯ ಆಯುಕ್ತರಿಗೆ ಪಂಪ ಮಹಾಕವಿ ರಸ್ತೆಯನ್ನು ವಿಶೇಷ ರಸ್ತೆ ಎಂದು ಪರಿಗಣಿಸಿ, ಅಭಿವೃದ್ಧಿಪಡಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಶ್ರೀ ಗಣೇಶ್ ಚಾರಿಟಬಲ್ ಟ್ರಸ್ಟ್ ಅವರ ಸಹಯೋಗದೊಂದಿಗೆ ಪಾರಂಪರಿಕ ಮಹತ್ವವುಳ್ಳ ಆದಿ ಕವಿ ಪಂಪನ ಪ್ರತಿಮೆ ಸ್ಥಾಪಿಸಬೇಕೆಂಬ ಸದುದ್ದೇಶವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಈ ಪುತ್ಥಳಿ ಸ್ಥಾಪನೆಯಿಂದಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಲೀ, ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗಲೀ ಉಂಟಾಗುವುದಿಲ್ಲ, ಪರಿಷತ್ತಿನ ಕಟ್ಟಡಕ್ಕೆ ಹತ್ತಿರವಾಗುವಂತೆ ಪುತ್ಥಳಿಯನ್ನು ಸ್ಥಾಪಿಸಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

——–

ಘೋಷ ವಾಕ್ಯ ಕೈ ಬಿಟ್ಟಿಲ್ಲ – ನಾಡೋಜ ಡಾ. ಮಹೇಶ ಜೋಶಿ ಸ್ಪಷ್ಟನೆ

ಪರಿಷತ್ತಿನ ಆವರಣದ ಕಮಾನಿನ ಮೇಲೆ ಈ ಹಿಂದೆ ಅಳವಡಿಸಿದ್ದ ಮನುಷ್ಯಜಾತಿ ತಾನೊಂದೆ ವಲಂ ಎನುವ ಆದಿ ಕವಿ ಪಂಪ ಅವರ ಘೋಷವಾಕ್ಯವನ್ನು ಬದಲಾಯಿಸಲಾಗಿದೆ ಎಂದು ತಪ್ಪು ಮಾಹಿತಿಯನ್ನು ಕೆಲವರು ಹರಡುತ್ತಿದ್ದಾರೆ. ವಾಸ್ತವವೆಂದರೆ ಘೋಷ ವಾಕ್ಯವನ್ನು ಪಂಪ ಮಹಾಕವಿ ಪ್ರತಿಮೆಯ ಬಳಿ ಉಳಿಸಿಕೊಳ್ಳಲಾಗುವುದು ಇದರ ಜೊತೆಯಲ್ಲಿ ವಿಶ್ವ ಮಾನವತ್ವನ್ನು ಸಾರುವ ಕುವೆಂಪು ಅವರ ʻಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಘೋಷ ವಾಕ್ಯವನ್ನು ಸೇರ್ಪಡೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಎಲ್ಲಾ ಕಡೆಯಿಂದ ಬರುವ ಕನ್ನಡಿಗರು ಕನ್ನಡತನವನ್ನು ತಾವೂ ಇರುವಲ್ಲಿಯೂ ಉಳಿಸಿಕೊಳ್ಳಲಿ ಎನ್ನುವ ಮಹಾದಾಸೆಯನ್ನು ಪರಿಷತ್ತು ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ಕೆಲವರು ಕನ್ನಡಿಗರಲ್ಲಿ ಭೇದವನ್ನು ಹುಟ್ಟಿಸುವ ಮೂಲಕ ಬಿನ್ನಾಭಿಪ್ರಾಯ ಬರುವಂತೆ ಮಾಡುವ ಕುಚೇಷ್ಟೆಯನ್ನು ಮಾಡುತ್ತಲೇ ಬಂದಿರುವುದನ್ನು ನೋಡುತ್ತಲೇ ಇದ್ದೇವೆ. ಈ ಹಿಂದೆಯೂ ಪಂಪ ಮಹಾಕವಿ ರಸ್ತೆಯ ಮರು ನಾಮಕರಣ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ ಎಂಬ ಸುಳ್ಳು ವದಂತಿಯನ್ನು ಹರಡುವ ಮೂಲಕ ಜೈನ ಸಮುದಾಯದವರನ್ನು ತಪ್ಪುದಾರಿಗೆ ಎಳೆದಿದ್ದರು. ಇದರ ಜೊತೆಗೆ ಇದೇ ತಂಡ ಹಾವೇರಿಯಲ್ಲಿ ನಡೆದ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಸಮುದಾಯಕ್ಕೆ ಸೂಕ್ತವಾದ ಆಧ್ಯತೆಯನ್ನೇ ಕೊಟ್ಟಿಲ್ಲ ಎಂಬ ಸುಳ್ಳು ಆರೋಪವನ್ನು ಮಾಡಿ ಕೊನೆಯಲ್ಲಿ ಸತ್ಯಾಸತ್ಯತೆ ಜನರ ಮುಂದೆ ಬಂದಾಗ ಆ ಗುಂಪಿನ ಸದ್ದು ಅಡಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹಿತವನ್ನು ಕಾಯುವುದರ ಜೊತೆಗೆ ಯಾವುದೇ ವಿಭಾಗದಲ್ಲಿಯೂ ಕನ್ನಡಿಗರ ಅಸ್ಮಿತೆಗೆ ಧಕ್ಕೆ ಬರಬಾರದೆಂಬುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಎಂದು ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fifteen − 10 =