ಮರಾಠಾ ಸಮಾಜವನ್ನು 2ಎ ಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟ ವತಿಯಿಂದ ಪ್ರತಿಭಟನೆ!
ಯುವ ಭಾರತ ಸುದ್ದಿ ಬೆಳಗಾವಿ : ಮರಾಠಾ ಸಮಾಜವನ್ನು 3 ಬಿ ಯಿಂದ 2 ಎ ಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟ ವತಿಯಿಂದ ಸುವರ್ಣ ಸೌಧ ಎದರುಗಡೆ ಕೊಂಡಸಕೊಪ್ಪದಲ್ಲಿ ಮಂಗಳವಾರದಂದು ಬೆಂಗಳೂರಿನ ಗವಿಪುರ ಮಠದ ಮರಾಠಾ ಸಮಾಜದ ಸ್ವಾಮಿಜಿಗಳಾದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಗಳ ನೇತೃತ್ವದಲ್ಲಿ ಸಾವಿರಾರು ಮರಾಠಾ ಸಮಾಜದ ಯುವಕ ಯುವತಿಯರು, ಮಹಿಳೆಯರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಮರಾಠಾ ಸಮುದಾಯ ರಾಜ್ಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ ಸಮಾಜವಾಗಿದ್ದು, ಸಮುದಾಯ ಅಭಿವೃದ್ದಿ ಹೊಂದಬೇಕಾದರೆ ಮರಾಠಾ ಸಮಾಜವನ್ನು 3 ಬಿ ಯಿಂದ 2ಎ ಗೆ ಸೇರಿಸುವುದು ಅನಿವಾರ್ಯವಾಗಿದೆ. ಸುಮಾರು 5 ವರ್ಷಗಳಿಂದ ಸಮುದಾಯವನ್ನು 2 ಎ ಗೆ ಸೇರಿಸುವಂತೆ ಪ್ರತಿಭಟಿಸಲಾಗುತ್ತಿದೆ. ಮರಾಠಾ ಸಮಾಜ ಎಲ್ಲ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವ ಸಮಾಜವಾಗಿದೆ, ಈ ದೇಶಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಅಪಾರ ಕೋಡುಗೆಯನ್ನು ನೀಡಿರುವ ಸಮಾಜವಾಗಿದೆ.
ಆದ್ದರಿಂದ ಸರ್ಕಾರ ಸಮಾಜದ ಶ್ರೇಯೋಭಿವೃಧ್ದಿಗೆ ಅನುಕೂಲವಾಗುವಂತೆ ತಕ್ಷಣವೇ 2 ಎ ಮೀಸಲಾತಿಯನ್ನು ನೀಡುವಂತೆ ಆಗ್ರಹಿಸಿದರು.
ಶಾಸಕರಾದ ಅನಿಲ ಬೆನಕೆ, ಶ್ರೀಮಂತ ಪಾಟೀಲ, ಅಭಯ ಪಾಟೀಲ, ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಸಮಾಜದ ಮುಖಂಡರುಗಳಾದ ಕಿರಣ ಜಾಧವ, ಧನಂಜಯ ಜಾಧವ, ಅನೇಕ ಮರಾಠಾ ಮುಖಂಡರು ಹಾಗೂ ಮಾಜಿ ಸಂಸದ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ನಾಗರಿಕರು ಮತ್ತು ಪಕ್ಷ, ಬೇಧ ಮರೆತು ಎಲ್ಲ ರಾಜಕೀಯ ನಾಯಕರು ಮರಾಠಾ ಸಮಾಜದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.