Breaking News

ಸಿದ್ಧಿಯ ಸತ್ಪುರುಷ ಶ್ರೀ ಉಜ್ಜಯಿನಿ ಸಿದ್ದಲಿಂಗ ಭಗವತ್ಪಾದರು

Spread the love

ಸಿದ್ಧಿಯ ಸತ್ಪುರುಷ ಶ್ರೀ ಉಜ್ಜಯಿನಿ ಸಿದ್ದಲಿಂಗ ಭಗವತ್ಪಾದರು

ಶ್ರೀ ಜಗದ್ಗುರು ಪಂಚಾಚಾರ್ಯರ ಅಣತಿಯಂತೆ ಸ್ಥಾಪನೆಗೊಂಡು ಧಾರ್ಮಿಕ ಜಾಗೃತಿಯ ಜೊತೆಗೆ ಸಾಮಾಜಿಕ ಸತ್ಕ್ರಾಂತಿಯುಂಟು ಮಾಡಿದ ವೀರಶೈವ ಧರ್ಮ ನಿರಂಜನ ದೇವರಮನೆ

ಯುವ ಭಾರತ ಸುದ್ದಿ ಚಿತ್ರದುರ್ಗ :
ವಿಶ್ವದಲ್ಲಿ ವಿವಿಧ ಧರ್ಮಗಳು ಉದಯಿಸುವುದರೊಂದಿಗೆ ವ್ಯಷ್ಟಿಯ ಪ್ರಗತಿ ಮತ್ತು ಸಮಷ್ಠಿಯ ಉನ್ನತಿಗೆ ಸದಾ ಶ್ರಮಿಸುತ್ತ ಬಂದಿವೆ. ಇಂತ ಧರ್ಮಗಳ ಸಂಗಮವಾಗಿರುವ ಭಾರತದ ನೆಲದಲ್ಲಿ ವೀರಶೈವ ಧರ್ಮವು ಶ್ರೀ ಜಗದ್ಗುರು ಪಂಚಾಚಾರ್ಯರ ಅಣತಿಯಂತೆ ಸ್ಥಾಪನೆಗೊಂಡು ಧಾರ್ಮಿಕ ಜಾಗೃತಿಯ ಜೊತೆಗೆ ಸಾಮಾಜಿಕ ಸತ್ಕ್ರಾಂತಿಯುಂಟು ಮಾಡಿದ ಒಂದು ವಿಶಿಷ್ಟ ಧರ್ಮವಾಗಿದೆ.

ಯುಗಗಳ ಇತಿಹಾಸ-ಪರಂಪರೆ ಹೊಂದಿರುವ ಈ ಪವಿತ್ರ ಧರ್ಮಪೀಠಗಳ ಶ್ರೀ ಜಗದ್ಗುರುಗಳು ಜನಮನದಲ್ಲಿ ಧಾರ್ಮಿಕ ಆಚಾರ-ವಿಚಾರಗಳನ್ನು ಅರುಹಿ, ಜಾಗತಿಕ ಶಾಂತಿ-ನೆಮ್ಮದಿಯನ್ನ ತಂದಿತ್ತ ಕಾರಣಿತ ಯುಗಪುರುಷರಾಗಿದ್ದಾರೆ. ಇಂಥ ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀ ಮದುಜ್ಜಯನಿ ಸದ್ಧರ್ಮ ಪೀಠ ಸದಾ ಸಮಾಜಮುಖಿಯಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಎಲ್ಲ ಸಮುದಾಯದ ಜನತೆಗೆ ಸರ್ವೋದಯ-ಸಮನ್ವಯ ಸಾಮರಸ್ಯ ಹಾಗೂ ಶಾಂತಿ-ಸಮೃದ್ಧಿಯ ಸಂದೇಶ ನೀಡುತ್ತ ಬಂದಿದೆ. ಈ ಪವಿತ್ರ ಪರಂಪರೆಯಲ್ಲಿ ಅನೇಕ ಶ್ರೀ ಭಗವತ್ಪಾದರು ತಾವು ನಡೆದ ಧರ್ಮದ ಹಾದಿಯಲ್ಲಿ ಜನತೆಯನ್ನು ಮುನ್ನೆಡೆಸಿ ಸಾರ್ಥಕತೆ ಪಡೆದಿದ್ದಾರೆ. ಅವರಲ್ಲಿ ಲಿಂಗೈಕ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಸಹ ಒಬ್ಬರಾಗಿದ್ದಾರೆ.

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಭಗವತ್ಪಾದರಾದ ಇವರು ವೀರಶೈವ ಧರ್ಮ ಮತ್ತು ಸಂಸ್ಕೃತಿಯನ್ನು ಬಲಗೊಳಿಸಿ ಅದನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಮುಖೇನ ಅದರ ಅಖಂಡತೆಯನ್ನು ವಿಸ್ತರಿಸಿದ ಮಹಾಮಹಿಮರಲ್ಲಿ ಪ್ರಮುಖರಾಗಿದ್ದಾರೆ.

ಚಿತ್ರದುರ್ಗ ಸೀಮೆಯ ಬಂಗಾರನಾಯಕನಹಳ್ಳಿ ಹಿರೇಮಠದ ವೇ.ಚನ್ನಬಸಯ್ಯ ಮತ್ತು ಸೌ.ಗುರುಸಿದ್ಧಮ್ಮನವರ ಪುಣ್ಯಗರ್ಭದಲ್ಲಿ ೦೧-೦೨-೧೮೯೦ ರಂದು ಜನಿಸಿ ಎಲ್ಲಗುರು-ಹಿರಿಯರ ಅಚ್ಚು-ಮೆಚ್ಚಿನ ಸಾಧಕನಾಗಿ ಬೆಳೆದು ತನ್ನ ೮ನೇ ವಯಸ್ಸಿನಲ್ಲಿಯೇ ಇಷ್ಟಲಿಂಗ ದೀಕ್ಷೆ ಹಾಗೂ ಧರ್ಮೋಪದೇಶವನ್ನು ಪಡೆದು ೧೯೦೬ ರಂದು ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದಜಗದ್ಗುರುವಾಗಿ ನಿಯುಕ್ತಿ ಹೊಂದಿ ತಮ್ಮ ಅಧಿಕಾರವನ್ನು ಸ್ವೀಕರಿಸಿ ಪೀಠವನ್ನು ಮುನ್ನೆಡೆಸುವಲ್ಲಿ ಯಶಸ್ವಿಯಾದ ಧೀರ ಪುರುಷರು. ಪತಂಜಲಿ ಮಹರ್ಷಿಯಯೋಗಶಾಸ್ತ್ರ, ಷಡ್‌ದರ್ಶನಗಳ ಅಧ್ಯಯನ ಹಾಗೂ ಸಿದ್ಧಾಂತ ಶಿಖಾಮಣಿ, ಭಗವದ್ಗೀತೆಯಂಥ ವಿಷಯಗಳ ಚಿಂತನೆಯ ಮೂಲಕ ತಮ್ಮ ವಿದ್ವತ್ತನ್ನು ಹೆಚ್ಚಿಸಿಕೊಂಡವರು.

ಶ್ರೀ ಭಗವತ್ಪಾದರು ಸದಾ ಇಷ್ಟಲಿಂಗಪೂಜೆ, ಜಪ-ತಪಗಳಿಂದ ದಿವ್ಯಜ್ಞಾನಿಯಾಗಿ ಶಿವಯೋಗ ಸಿದ್ಧಿಯನ್ನು ಸಾಧಿಸಿಕೊಂಡು ಜೀವನದ ಕಷ್ಟ-ನಷ್ಟಗಳಿಗೆ ಸಿಲುಕಿ ಬಾಯಿ ಬಿಡುವ ಭಕ್ತರಿಗೆ ತಮ್ಮ ಶಕ್ತಿಯನ್ನುಅನುಗ್ರಹಿಸುತ್ತಿದ್ದ ಅಪ್ರತಿಮ ಶಿವಯೋಗಿಗಳು, ನಿರಂತರವಾಗಿ ತಮ್ಮ ಆಚಾರ-ವಿಚಾರಗಳನ್ನು ಕಾಯ್ದುಕೊಂಡು ಸಂಸ್ಕೃತ, ವೇದ, ಆಗಮಗಳನ್ನು ಅಧ್ಯಯನ ಮಾಡಿ, ಶಿವಾದ್ವೈತ್‌ವನ್ನು ಮತ್ತಷ್ಟು ಪ್ರಜ್ವಲಗೊಳಿಸಿ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಲಗಳ ಮುಖೇನ ಶಿವಯೋಗವನ್ನು ಸಾಧಿಸುವ ಪರಿಯನು ್ನಅತ್ಯಂತ ವ್ಯವಸ್ಥಿತವಾಗಿ ಬೋಧಿಸುತ್ತಿದ್ದರು.

ನಾಡಿನ ಹಲವು ಧರ್ಮಪೀಠಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಂದರ್ಭಗಳಲ್ಲಿ ತಮ್ಮ ಪ್ರಬದ್ಧಚಿಂತನೆ ಮತ್ತುಕ್ರಿಯಾತ್ಮಕ ಆಚರಣೆಯ ಮೂಲಕ ಅವುಗಳನ್ನು ಪರಿಹರಿಸುತ್ತಿದ್ದರು. ಜಾತಿ ಮತ ಪಂಥಗಳ ಮೇರೆಯನ್ನು ದಾಟಿ ಜೀವಾವಳಿಗಳಿಗೆ ಲೇಸನ್ನೇ ಬಯಸುವ ಹಂಬಲಹೊಂದಿ ಬೇಡಿ ಬಂದ ಭಕ್ತರಿಗೆ ಧರ್ಮ, ಸಂಸ್ಕಾರ, ಸಂದೇಶಗಳನ್ನು ನೀಡುತ್ತಿದ್ದರು. ತಾವು ಸಂಚರಿಸಿದ ಕಡೆಗಳಲ್ಲೆಲ್ಲ ಕುಡಿಯುವ ನೀರು, ಕಲಿಯುವ ಶಾಲೆ, ಸಂಸ್ಕಾರ-ಸಂಸ್ಕೃತಿ ನೀಡುವ ದೇವಮಂದಿರ, ಮುಕ್ತಿ ನೀಡುವ ರುದ್ರಭೂಮಿ ಹಾಗೂ ದೀನ-ದಲಿತ-ಶೋಷಿತ-ಅಸಹಾಯಕರಿಗೆ ಜೀವನ ಸೌಲಭ್ಯದ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ಜಾತ್ಯಾತೀತ ಸಮಾಜವಾದ ಪ್ರಜಾಸತ್ತಾತ್ಮಕ ನಿಲುವುಗಳನ್ನು ಎತ್ತಿಹಿಡಿಯುತ್ತಿದ್ದರು. ಇದಕ್ಕೆ ಪವಾಡ ಸದೃಶಗಳೆಂಬಂತೆ ಸಿದ್ಧಲಿಂಗನ ಬಾವಿಗಳು ಉತ್ತರಕರ್ನಾಟಕದಲ್ಲಿ ಇಂದಿಗೂ ಸಾಕ್ಷಿಯಾಗಿವೆ.
ಭಕ್ತರಿಗೆ ಏನೇ ಕಷ್ಟ-ಕಾರ್ಪಣ್ಯಗಳು ಬಂದರೂ ತಮ್ಮ ತಪಃ ಶಕ್ತಿಯಿಂದ ಅವೆಲ್ಲವುಗಳನ್ನು ಪರಿಹರಿಸಿ, ಅವರಲ್ಲಿಧರ್ಮ ಶ್ರದ್ಧೆ-ದೈವ ಶ್ರದ್ಧೆ ಬೆಳೆಯುವಂತೆ ಮಾಡಿದ್ದರು.

ಜನತೆಯ ಬದುಕಿಗೆ ಬೇಕಾಗಿದ್ದ ಸಂಸ್ಕಾರ ಮತ್ತು ಶಿಕ್ಷಣವನ್ನು ನೀಡಲು ಹಾಗೂ ಅನ್ನದಾಸೋಹ ಮತ್ತು ವಿದ್ಯಾದಾನಕ್ಕೆ ಅನುಕೂಲ ಕಲ್ಪಿಸಲುತಾವು ಸಾವಿರಾರು ಹೊನ್ನುಗಳನ್ನು ಅನುಗ್ರಹಿಸಿ, ವೀರಶೈವ ವಿದ್ಯಾವರ್ದಕ ಸಂಘವನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದವರು. ಈ ಸಂಘ ಇಂದು ನಾಡಿನೆಲ್ಲೆಡೆತನ್ನ ಶಾಖೆಗಳನ್ನು ವಿಸ್ತರಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಟ್ಟಿದೆ.

ಧರ್ಮಪೀಠಗಳ ಸುಧಾರಣೆ ಹಾಗೂ ಮಹತ್ವವನ್ನು ಹೆಚ್ಚಿಸಲು ತಮ್ಮ ಅಧ್ಯಕ್ಷತೆಯಲ್ಲಿ ಭಾರತದ ಧರ್ಮದ ಪುಣ್ಯನೆಲೆವೀಡು ವಾರಣಾಸಿಯಲ್ಲಿ ೧೯೧೮ನೇ ಮಾರ್ಚ್ ೨೦ ರಂದು ಮಹಾ ಸಮ್ಮೇಳನವನ್ನು ಅರ್ಥಪೂರ್ಣತೆಯಿಂದ ನಡೆಸಿ ಎಲ್ಲ ಧರ್ಮೀಯರು ವೀರಶೈವವನ್ನು ಗೌರವಿಸುವಂತೆ ಮಾಡಿದ್ದವರು. ಸಮಾಜದ ಉನ್ನತಿ ಮತ್ತು ಪ್ರಗತಿಗಾಗಿ ಹಾಗೂ ಏಕತೆ ಮತ್ತು ಸಮನ್ವಯತೆ ಸಾಧಿಸಲು ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ಜರುಗಿದ ವೀರಶೈವ ಮಹಾಸಭೆಯ ೫ನೇ ಅಧಿವೇಶನದ ಸಾರಥ್ಯ-ಸಾನ್ನಿಧ್ಯ ವಹಿಸಿ, ತಮ್ಮ ಸಂದೇಶದಲ್ಲಿ ಸಹಕಾರ ಸಮೃದ್ಧಿ ಸಹಬಾಳ್ವೆ ಸಮನ್ವಯತೆ ಮುಂತಾದ ಸಮಾಜೋದ್ಧಾರ್ಮಿಕ ಮೌಲ್ಯಗಳನ್ನು ಹರಿಯಬಿಟ್ಟಿದ್ದು. ಇಂದಿನ ವೀರಶೈವಧರ್ಮ ಹಾಗೂ ಸಮಾಜದ ಗಟ್ಟಿತನಕ್ಕೆ ಅಡಿಪಾಯವಾಗಿದೆ. ಇದೇ ಜಿಲ್ಲೆಯ ಬುಕ್ಕಾಂಬುಧಿ ಬೆಟ್ಟದಲ್ಲಿ ಉಗ್ರವಾದ ತಪಸ್ಸನ್ನು ಕೈಗೊಂಡು ತಮ್ಮಯೋಗಿಕ ಶಕ್ತಿಯನ್ನು ಪಡೆದು ಅಷ್ಟಸಿದ್ಧಿಗಳನ್ನು ಸಾಧಿಸಿಕೊಂಡು ಅವುಗಳನ್ನು ಭಕ್ತರಿಗೆಧಾರೆಯೆರೆಯುತ್ತಿದ್ದ ದೃಶ್ಯಗಳು ಇಂದಿಗೂ ಅವರ್ಣನೀಯವಾಗಿವೆ.

ಹೀಗೆ ಭಕ್ತರನ್ನ ಬೆಳಕಿನೆಡೆಗೆ ಕರೆತಂದು, ಜ್ಞಾನ-ಕ್ರಿಯೆಗಳನ್ನು ಧಾರೆಯೆರೆದು ಶಿವಾಧ್ವೈತ್ ಸಿದ್ಧಾಂತದ ಪ್ರಭೋಧಕರಾಗಿ, ಲಿಂಗಗುಣ ಸಂಪನ್ನ ಶಿವಾಚಾರದ ಗಣಿಯಾಗಿ, ಗುರು-ಲಿಂಗ-ಜಂಗಮತ್ವದ ಗುರುಸಾರ್ವಭೌಮರಾಗಿ, ಪಂಚಪೀಠಗಳ ಕಾರಣಿಕ ಯುಗಪುರುಷರಾಗಿ, ಉಜ್ಜಯಿನಿ ಸದ್ಧರ್ಮಪೀಠಕ್ಕೆ ಶಕ್ತಿ ತುಂಬಿದ ಜ್ಞಾನಸೂರ್ಯರಾದ ಶ್ರಿ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಸಾವಿರಾರು ಪವಾಡಗಳು ಹಾಗೂ ಸಂಕಲ್ಪಿತ ಕಾರ್ಯಗಳನ್ನು ಕಾರ್ಯಗತಗೊಳಿಸುವ ಮುಖೇನ ಭಕ್ತರ ಹೃದಯದಲ್ಲಿ ಸಾಧನೆಯ ಸಿದ್ಧಿ ಸತ್ಪುರುಷನೆಂದೆ ಅಭಿದಾನವನ್ನು ಪಡೆದು ೧೯೩೬ರಲ್ಲಿ ಲಿಂಗಾಂಗ ಸಾಮರಸ್ಯದಲ್ಲಿ ಒಂದಾಗಿ ತಮ್ಮ ಚಿತ್ಪ್ರಭೆಯನ್ನು ಹಾಗೂ ಉಳಿಸಿಕೊಂಡವರು. ಇಂಥ ಪರಮತಪೋನಿಧಿಗಳ ಪವಾಡ ಸದೃಶ ಬಹುಮುಖಿ ಕಾರ್ಯಗಳು ಭಕ್ತರ ಹೃನ್ಮಂದಿರಗಳಲ್ಲಿ ಈಗಲೂ ವಿರಾಜಮಾನವಾಗಿವೆ.

ಶ್ರೀ ರಂಭಾಪುರಿ ಶಿವಾನಂದ ಶಿವಾಚಾರ್ಯ ಭಗವತ್ಪಾದರಿಗೆ ರಂಭಾಪುರಿ ಪೀಠದ ಜಗದಾಚಾರ್ಯರನ್ನಾಗಿ ಆರೈಸಿ, ಅಭಿನಂದಿಸಿದ್ದು ಹಾಗೂ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರಿಗೆ ಮುಂದೊಂದು ದಿನ ಜಗದ್ಗುರುಗಳಾಗುವಂತೆ ಆರ್ಶೀವಾದ ಮಾಡಿದ್ದು ಹಾಗೂ ವೀರಶೈವ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರಕ್ಕಾಗಿ ೧೯೨೭ರ ಶ್ರೀ ಜಗದ್ಗುರು ದಾರುಕ ಜಯಂತಿ ಶುಭ ಸಂದರ್ಭದಲ್ಲಿ ಪಂಚಾಚಾರ್ಯ ಪ್ರಭಾ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಶ್ರೀ ಕಾಶೀನಾಥ ಶಾಸ್ತ್ರಿಗಳವರ ದಕ್ಷ ಸಂಪಾದಕತ್ವದೊಂದಿಗೆ ಪಂಚಪೀಠಾಚಾರ್ಯರ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಾಭಿವೃದ್ಧಿ ಕಾರ್ಯಗಳನ್ನು ಅನಾವರಣಗೊಳಿಸಿದ್ದು ಅತ್ಯಂತ ಅವಿಸ್ಮರಣೀಯ ಚಾರಿತ್ರಿಕ ಸಂಗತಿಯಾಗಿದೆ.

ಪ್ರಸ್ತುತ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀಮದ್ ಉಜ್ಜಯಿನಿ ಸದ್ಧರ್ಮಪೀಠದ ಪರಂಪರೆ ಹಾಗೂ ಧರ್ಮಾಚರಣೆಗಳನ್ನು ಅನುಷ್ಠಾನಗೊಳಿಸುವ ಮುಖೇನ ಲಿಂ.ಭಗವತ್ಪಾದರ ಪವಾಡ ಸದೃಶ ಕಾರ್ಯಗಳನ್ನು ಸಮಾಜಮುಖಿಯಾಗಿಸಿರುವುದು ಇನ್ನಷ್ಟು ವಿಶೇಷವಾಗಿದೆ. ಕಾರಣಿಕಯುಗಪುರುಷ ಪರಮತಪೋನಿಧಿ ಲಿಂಗೈಕ್ಯ ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ ೮೭ನೇ ವರ್ಷ ಪುಣ್ಯ ಸಂಸ್ಮರಣೆ ನಿಮಿತ್ತ ಪ್ರಸ್ತುತ ಶ್ರೀ ಜಗದ್ಗುರುಗಳು ಚಿಕ್ಕಮಗಳೂರು ಜಿಲ್ಲೆಯ ಬುಕ್ಕಾಂಬುಧಿ ತಪೋಕ್ಷೇತ್ರದಲ್ಲಿ ೦೬-೦೧-೨೦೨೩ ರಿಂದ ೧೦-೦೧-೨೦೨೩ ರವರೆಗೆ ಇಷ್ಟಲಿಂಗ ತಪೋನುಷ್ಟಾನ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ೧೧-೦೧-೨೦೨೩ ರಂದು ಬುಕ್ಕಾಂಬುಧಿ ಮಹಾಕ್ಷೇತ್ರದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಮಂಗಲ ಸಾನ್ನಿಧ್ಯದಲ್ಲಿ ಪುಣ್ಯ ಸ್ಮರಣೋತ್ಸವ ಮತ್ತು ಶ್ರೀ ಉಜ್ಜಯಿನಿ ಮಹಾಪೀಠದಲ್ಲಿ ಪ್ರಸ್ತುತ ಶ್ರೀ ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪವಿತ್ರ ಸಾನ್ನಿಧ್ಯದಲ್ಲಿ ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳವರ ಸಂಸ್ಮರಣೆಯು ಅತ್ಯಂತ ಭಕ್ತಿ, ಶ್ರದ್ಧೆ, ನಿಷ್ಠೆಯೊಂದಿಗೆ ನಾಡಿನ ಸಮಸ್ತ ಭಕ್ತಾದಿಗಳ ಉಪಸ್ಥಿತಿಯಲ್ಲಿ ಜರುಗಿದವು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

3 × one =