Breaking News

ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರ ನೀಡಿ

Spread the love

ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರ ನೀಡಿ

 

 

ಯುುವ ಭಾರತ ಸುದ್ದಿ ಬೆಳಗಾವಿ : ರಾಜ್ಯದ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರವನ್ನು ನೀಡಲು ಹಾಗೂ ರೈತರ ಮೇಲಿನ ಎಲ್ಲಾ ಕೇಸ್ ಗಳನ್ನು ಹಿಂಪಡೆಯಲು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಸ್) ವತಿಯಿಂದ ಸಂಘಟಿಸಿದ್ದ ಬೆಳಗಾವಿ
ಚಲೋದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ಸಾಗುವಳಿದಾರರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆಯವರಿಂದ ಆಗುತ್ತಿರುವ ಕಿರುಕುಳ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಅರಣ್ಯ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರೆಟರಿ ಡಾ. ಸಂಜಯ್ ಎಸ್. ಬಿಜ್ಜುರ್ ಮನವಿ ಪತ್ರ ಸ್ವೀಕರಿಸಿ ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ರೈತರ ಪರವಾದ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದರು.

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರವನ್ನು ನೀಡಬೇಕೆಂದು ಹಾಗೂ ರೈತರ ಮೇಲಿನ ಎಲ್ಲಾ ಕೇಸ್ ಗಳನ್ನು ವಾಪಸ್‌ ಪಡೆಯಬೇಕು, ಇನ್ನಿತರ ಬೇಡಿಕೆಗಳಿಗಾಗಿ ಆಗ್ರಹಿಸಿ ರಾಜ್ಯ ಸಮಿತಿಯಿಂದ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಆರ್. ಕವಿತಾ ರಾಣಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು ರೈತರ ಮೇಲಿನ ಎಲ್ಲಾ ಕೇಸ್ ಗಳನ್ನು ಹಿಂಪಡೆಯುವುದಾಗಿ ಮತ್ತು ಹಕ್ಕು ಪತ್ರ ನೀಡುವುದಕ್ಕಾಗಿ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳಿದರು

ರಾಜ್ಯ ಅಧ್ಯಕ್ಷ ಹೆಚ್.ವಿ. ದಿವಾಕರ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಬಡ ರೈತ ಕೃಷಿ ಕಾರ್ಮಿಕರು ಅರಣ್ಯದಂಚಿನ ಕುರುಚಲು ಗಿಡ, ಕಲ್ಲು ಭೂಮಿ ಇರುವ ಪ್ರದೇಶದ ಜಮೀನಿನಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸುಮಾರು 70 ರಿಂದ 80 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಬಹುಪಾಲು ಜನರಿಗೆ ಇದರಿಂದ ಬರುವ ಅಲ್ಪ ಸ್ವಲ್ಪ ವರಮಾನವೇ ಜೀವನಾಧಾರವಾಗಿದೆ. ಆದರೆ ಸದರಿ ಸರ್ಕಾರಗಳು ಇಲ್ಲಿಯವರೆವಿಗೂ ಉಳುಮೆಗೆ ಅವಕಾಶವೀಯುತ್ತಾ ಬಂದಿದ್ದರೂ ಸಾಗುವಳಿದಾರರಿಗೆ ಹಕ್ಕು ಪತ್ರವನ್ನು ನೀಡಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳದಿರುವುದರಿಂದ, ಶಾಸನಬದ್ದವಾಗಿ ಭೂಮಿಯ ಹಕ್ಕು ದೊರೆಯದೆ ಇರುವುದರಿಂದ ಅವರು ಸಮಾಜದಲ್ಲಿನ ಇತರೆ ಜನರಂತೆ ನಿಶ್ಚಿತ ಜೀವನ ರೂಪಿಸಿಕೊಳ್ಳಲಾಗದೆ ದಶಕಗಳಿಂದ ತೀವ್ರ ಮಾನಸಿಕ ತೊಳಲಾಟದಲ್ಲಿದ್ದು, ಜರ್ಜರಿತರಾಗಿದ್ದಾರೆ. ಅಲ್ಲದೆ ಅವರ ಕುಟುಂಬ ಹಾಗೂ ಮಕ್ಕಳ ಭವಿಷ್ಯವು ತೀವ್ರ ಅಭದ್ರತೆಯಿಂದ ಕೂಡಿದೆ.

ಬಹುತೇಕ ಸಾಗುವಳಿದಾರರು ಅನಕ್ಷರಸ್ಥರಾಗಿದ್ದು ಕೃಷಿಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಮುಖ್ಯವಾಗಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕೈಗಾರೀಕರಣವು ಇಲ್ಲದಿರುವುದರಿಂದ ಜೀವನೋಪಾಯಕ್ಕಾಗಿ ಬಡ ರೈತರು ಅನಿವಾರ್ಯವಾಗಿ ಬೇರೆ ದಾರಿಯಿಲ್ಲದೆ ಈ ಭೂಮಿಗಳಲ್ಲೇ ಒತ್ತುವರಿಯಾಗಿ ಉಳುಮೆ ಮಾಡುತ್ತಾ ಬಂದಿದ್ದಾರೆ. ಈ ನೆಲಗಳಲ್ಲೇ ಬೆವರು ರಕ್ತ ಸುರಿಸಿ ಉಳುಮೆ ಮಾಡಿ ದೇಶದ ಜನರಿಗೆ ಅನ್ನ ನೀಡುತ್ತಿರುವ ಇವರಿಗೆ ಅವರು ಉಳುಮೆ ಮಾಡಿರುವ ಜಮೀನಿನ ಹಕ್ಕು ಪತ್ರ ಸಿಗುವುದು ನ್ಯಾಯಯುತ ಹಕ್ಕಾಗಿದೆ.ಆದರೆ ಭೂಮಿಯ ಹಕ್ಕನ್ನು ಪಡಿಯುವ ಹೋರಾಟ ಅಷ್ಟು ಸರಳವಾಗಿಲ್ಲ, ಆಳ್ವಿಕೆ ಮಾಡಿದ ಎಲ್ಲಾ ಸರ್ಕಾರಗಳೂ ರೈತ ವಿರೋದಿ, ಕಾಪೋರೇಟ್ ಪರವಾಗಿವೆ. ಭೂಮಿಯ ಹಕ್ಕನ್ನು ಪಡಿಯಲು ರೈತರು ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಿಕೊಂಡು ಬಲಿಷ್ಠವಾದ ಹೋರಾಟವನ್ನು ಕಟ್ಟಬೇಕಿದೆ. ಯಾವ ರೀತಿಯಾಗಿ ದೆಹಲಿಯಲ್ಲಿ ರೈತರು, ಹೋರಾಟವನ್ನು ನಡೆಸಿದ್ದರು, ಅದೇ ಮಾದರಿಯಲ್ಲೇ ಕರ್ನಾಟಕದಲ್ಲಿ ಭೂಮಿಯ ಹಕ್ಕಿಗಾಗಿ ಹೋರಾಟವನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ರಾಜ್ಯ ಕಾರ್ಯದರ್ಶಿ ಎಂ. ಶಶಿಧರ್ ಮಾತನಾಡಿ, ಗೋಮಾಳ ಜಮೀನನ್ನು ರೈತರಿಗೆ ಫಾರಂ ನಂ.53 ತುಂಬುವ ಸಂದರ್ಭದಲ್ಲಿ ಯಾವ ರೀತಿಯಾಗಿತ್ತು, ಅದೇ ರೀತಿಯಾಗಿ ಹಕ್ಕು ಪತ್ರ ನೀಡಬೇಕು. ಇಲ್ಲವಾದಲ್ಲಿ ಸಾಗುವಳಿದಾರರಿಗೆ ಹಕ್ಕು ಪತ್ರ ಲಭಿಸದೆ ಇರುವುದರಿಂದ ಕೃಷಿ ಬೆಳೆ ಸಾಲ, ಕೃಷಿ ಪರಿಕರಗಳ ಮೇಲಿನ ಸಾಲ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿನ ಸಾಲ ಮತ್ತು ಇನ್ನಿತರ ಕೌಟುಂಬಿಕ ಖರ್ಚುಗಳಿಗೆ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲವು ದೊರೆಯದ ಪರಿಣಾಮವಾಗಿ ಬಹುತೇಕ ಬಡ ರೈತ ಕೃಷಿಕಾರ್ಮಿಕರು ಬೇರೆ ದಾರಿಯಿಲ್ಲದೇ ಕೈ ಸಾಲಕ್ಕೆ ಮೊರೆ ಹೋಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೊಮ್ಮೆ ಇಂತಹ ಪರಿಸ್ಥಿತಿಯು ಅವರನ್ನು ಆತ್ಮಹತ್ಯೆಯಂತಹ ದಾರುಣ ಕೃತ್ಯಕ್ಕೆ ಮೊರೆ ಹೋಗುವಂತೆ ಮಾಡಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.

ಇಲ್ಲಿಯವರೆಗೆ ರಾಜ್ಯದಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಜನರು ಅರ್ಜಿಗಳನ್ನು ಹಾಕಿದ್ದಾರೆ. ಆದರೆ ಅರ್ಜಿಯ ಬಗ್ಗೆ ಸರಿಯಾದ ಮಾಹಿತಿ ತಿಳಿಯದೆ ಕಾದು ಕೂತವರ ಸಂಖ್ಯೆಯೂ ಅಪಾರವಾಗಿದೆ. ಇತ್ತೀಚೆಗೆ ಸರ್ಕಾರದ ಆದೇಶವಿದ್ದರೂ ಅರಣ್ಯ ಇಲಾಖೆಯಿಂದ ರೈತರ ಮೇಲೆ ಕಿರುಕುಳಗಳು ಹೆಚ್ಚುತ್ತಲೇ ಇವೆ. ಸಂಪೂರ್ಣ ನೆಮ್ಮದಿಯನ್ನು ಹಾಳುಮಾಡಿಕೊಂಡು ಭಯದಲ್ಲಿಯೇ ರೈತರು ಸಾಗುವಳಿಯನ್ನು ಮಾಡಿಕೊಳ್ಳುವಂತಾಗಿದೆ. ಈ ಕಿರುಕುಳವನ್ನು ತಪ್ಪಿಸಲು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಭೂಮಿಯನ್ನು ವಶಪಡಿಸಿಕೊಂಡು, ಜಂಟಿ ಸರ್ವೆಗಳನ್ನು ಮಾಡಿ ಅರಣ್ಯದ ಅಂಚಿನ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಿಕೊಂಡು ರೈತರಿಗೆ ಹಕ್ಕು ಪತ್ರವನ್ನು ನೀಡಬೇಕು, ಬಗರ್ ಹುಕ್ಕುಂ ಸಾಗುವಳಿದಾರರಿಗೆ ರಕ್ಷಣೆಯನ್ನು ನೀಡಲು ಕಂದಾಯ ಇಲಾಖೆಯು ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗನ್ನವರ, ಬಿ. ಭಗವಾನ್‌ರೆಡ್ಡಿ, ಎಸ್ ಎನ್ ಸ್ವಾಮಿ, ಸೆಕ್ರೆಟೇರೇಟ್ ಸದಸ್ಯರಾದ ಶರಣಗೌಡ ಗೂಗಲ್ , ದೀಪಾ ಧಾರವಾಡ , ಮಹೇಶ ಎಸ್ ಬಿ, ಗೋವಿಂದ ಬಳ್ಳಾರಿ ಮುಂತಾದವರು ಇದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

16 − 13 =