2024ರಲ್ಲೂ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆ : ಅಮಿತ್ ಶಾ
ಯುವ ಭಾರತ ಸುದ್ದಿ ಗಾಂಧಿನಗರ :
ಗುಜರಾತ್ ವಿಧಾನಸಭೆ ಚುನಾವಣಾ ಫಲಿತಾಂಶ 2024 ರಲ್ಲೂ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗಲಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
ಗಾಂಧಿನಗರದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಗುಜರಾತ್ ಮಾತ್ರವಲ್ಲದೆ ಇಡೀ ದೇಶಕ್ಕೆ ಈ ಚುನಾವಣೆಯು ಮುಖ್ಯವೆನಿಸಿತ್ತು. ಏಕೆಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಇಡೀ ದೇಶವೇ ಸಜ್ಜಾಗಿದೆ ಎಂದು ಹೇಳಿದರು.
ಗುಜರಾತ್ ಮತ್ತು ನರೇಂದ್ರ ಮೋದಿ ಅವರನ್ನು ಅವಮಾನಿಸಲು ಯತ್ನಿಸಿದವರಿಗೆ ಗುಜರಾತ್ ಜನತೆ ತಕ್ಕೆ ಉತ್ತರವನ್ನೇ ನೀಡಿದ್ದಾರೆ. ಗುಜರಾತ್ ಚುನಾವಣಾ ಫಲಿತಾಂಶವು ಕಾಶ್ಮೀರದಿಂದ ಕನ್ಯಾಕುಮಾರಿ (ಉತ್ತರದಿಂದ ದಕ್ಷಿಣ), ದ್ವಾರಕಾದಿಂದ ಕಾಮಾಕ್ಯಕ್ಕೆ (ಪಶ್ಚಿಮದಿಂದ ಪೂರ್ವ) ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿಗಳ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ. ಚುನಾವಣೆಯಲ್ಲಿ ಜನರೇ ತೀರ್ಪು ನೀಡಿದ್ದಾರೆ ಎಂದು ಹೇಳಿದರು.