Breaking News

ಬೆಳಗಾವಿ ರಾಮಕೃಷ್ಣ ಮಿಶನ್ ಶ್ರೀ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ : ಶಿಕ್ಷಕರಿಗೆ ಕೇಳಿ ತಿಳಿಯುವ ನಮ್ರತೆ ಇರಬೇಕು-ಸ್ವಾಮಿ ನಿತ್ಯಸ್ಥನಂದಜೀ

Spread the love

ಬೆಳಗಾವಿ ರಾಮಕೃಷ್ಣ ಮಿಶನ್ ಶ್ರೀ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ : ಶಿಕ್ಷಕರಿಗೆ ಕೇಳಿ ತಿಳಿಯುವ ನಮ್ರತೆ ಇರಬೇಕು-ಸ್ವಾಮಿ ನಿತ್ಯಸ್ಥನಂದಜೀ

ಯುವ ಭಾರತ ಸುದ್ದಿ ಬೆಳಗಾವಿ :
ಆದರ್ಶ ಶಿಕ್ಷಕ ಎಂದರೆ ಇತರರಿಂದ ಕೇಳಿ ತಿಳಿಯುವ ನಮ್ರತೆ ಇರಬೇಕು. ಅನುಭವಗಳ ಮೂಲಕ ಕಲಿಯುವ ಮನೋವೃತ್ತಿ ಹೊಂದಿರಬೇಕು ಎಂದು ಬೆಂಗಳೂರು ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ನಿತ್ಯಸ್ಥನಂದಜೀ ಹೇಳಿದರು.
ನಗರದ ಕೋಟೆ ಆವರಣದ ರಾಮಕೃಷ್ಣ ಮಿಶನ್ ಆಶ್ರಮದ ಶ್ರೀ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥ ಶನಿವಾರ ನಡೆದ 19 ನೇ ವಾರ್ಷಿಕೋತ್ಸವದಲ್ಲಿ ಯಾರು ಅದರ್ಶ ಶಿಕ್ಷಕರು ? ವಿಷಯವಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕೇವಲ ಬೋಧನೆ ಮಾಡದೆ ಅವರಲ್ಲಿ ಜ್ಞಾನದ ತೃಷೆ ಹೆಚ್ಚಾಗುವಂತೆ ಶಿಕ್ಷಕರು ಬೋಧಿಸಬೇಕು. ಬೋಧನೆಯಲ್ಲಿ ತೊಡಗಿರುವ ಶಿಕ್ಷಕರ ಮನಸ್ಸು ಸದಾ ಮುಕ್ತವಾಗಿರಬೇಕು. ಪ್ರಕೃತಿಯಲ್ಲಿರುವ ಅಂಶಗಳನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು. ಬೋಧನೆಗೆ ಅವಶ್ಯವಿರುವ ಅಂಶಗಳನ್ನು ಯಥಾವತ್ತಾಗಿ ಪಡೆದುಕೊಳ್ಳದೆ ವಿಚಾರ ಮಾಡಿ ಪರಿಗಣಿಸಬೇಕು. ಆದರ್ಶ ಶಿಕ್ಷಕರ ಗುಣ-ಲಕ್ಷಣಗಳನ್ನು ಅನೇಕ ದೃಷ್ಟಾಂತ ಕಥೆಗಳ ಮೂಲಕ ಶಿಕ್ಷಕರ ಮನಮುಟ್ಟುವಂತೆ ಮಾರ್ಗದರ್ಶಿಸಿದರು.

ಮಕ್ಕಳಲ್ಲಿ ಜ್ಞಾನದ ಹಂಬಲ ಹೆಚ್ಚಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸುಂದರವಾಗಿ ಯೋಚಿಸುವ ಹಾಗೂ ಬೆಳೆಯುವ ಶಕ್ತಿ ಇದೆ. ಅದನ್ನು ಹೊರ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಮಕ್ಕಳಲ್ಲಿ ಎಲ್ಲವೂ ಇದೆ. ಅನೇಕಾನೇಕ ಸಾಧ್ಯತೆಗಳು ಅವರಲ್ಲಿ ಅಡಕವಾಗಿರುತ್ತದೆ. ಅವರಲ್ಲಿರುವ ಸುಪ್ತತೆ ಹೊರ ತರುವಲ್ಲಿ ಶಿಕ್ಷಕ ಸಹಾಯ ಮಾಡಬೇಕು ಎಂದು ಹೇಳಿದರು.

ಮಕ್ಕಳಲ್ಲಿ ಅಲೋಚನಾಶಕ್ತಿ, ಇಚ್ಛಾಶಕ್ತಿ, ಭಾವನಾತ್ಮಕತೆಯ ಸಮತೋಲನ ಹೇಗೆ ಬೆಳೆಸಿಕೊಳ್ಳಬೇಕು ಎನ್ನುವುದನ್ನು ಸಹಾ ಶಿಕ್ಷಕ ಕಲಿಸಿಕೊಡಬೇಕು ಎಂದು ಹೇಳಿದರು.

ನಮ್ಮ ಬಗ್ಗೆ ನಾವೇ ಉದಾತ್ತವಾಗಿ ಚಿಂತಿಸಬೇಕು. ನಮ್ಮಲ್ಲಿನ ಕೀಳರಿಮೆ ಬಿಡಬೇಕು. ನಮ್ಮಲ್ಲಿ ನ್ಯೂನತೆ ಇರಬಹುದು. ಆದರೆ, ಅದರ ಬಗ್ಗೆ ಚಿಂತಿಸದೇ ಅದನ್ನು ಮೀರಿ ಬೆಳೆಯಬೇಕು ಎಂದರು.

ಉತ್ತಮ ಮಾನವೀಯ ಸಂಬಂಧದಿಂದ ಮಾತ್ರ ನಮಗೆ ಸುಖ ಸಿಗುತ್ತದೆ. ಮಕ್ಕಳಿಗೆ ಮಾನವೀಯತೆ ಗುಣಗಳ ಬಗ್ಗೆ ಒತ್ತಿ ಒತ್ತಿ ಹೇಳಬೇಕು. ಅಂದಾಗ ಅವರು ಮಹಾನ್ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.

ಕಷ್ಟ ಬಂದಾಗ ಅಯ್ಯೋ ಎಂದು ಕುಗ್ಗಿ ಹೋಗದೇ ಅದನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಯಬೇಕು. ಕಷ್ಟ ಎದುರಿಸುವ, ಸಹಿಸುವ ಶಕ್ತಿ ನಮಗೆ ಇರಬೇಕು. ಯಾವ ಅವಮಾನವನ್ನು ಯಾರೂ ಸಹಿಸುವುದಿಲ್ಲ, ಆದರೆ, ಅದನ್ನು ಸಹಿಸಿಕೊಳ್ಳುವ ಗುಣವನ್ನು ಮಕ್ಕಳಿಗೆ ಎಳವೆಯಲ್ಲೇ ಕಲಿಸಬೇಕು ಎಂದು ಹೇಳಿದರು.
ಕಷ್ಟ, ಸಹಿಷ್ಣುತೆಯಿಂದ ಜೀವನ ಬಲವಾಗುತ್ತದೆ. ಮಕ್ಕಳಲ್ಲಿ ಅದನ್ನು ಸಹಿಸುವ ಗುಣಗಳನ್ನು ಬೆಳೆಸಬೇಕು. ಗಟ್ಟಿ ಮನಸ್ಸು ಹೊಂದುವ ಬಗ್ಗೆ ವಿವರಿಸಬೇಕು. ಕೇವಲ ವಿದ್ಯೆ ಮಾತ್ರ ಬೋಧಿಸಿದರೆ ಸಾಲದು.
ವಿದ್ಯಾರ್ಥಿಗಳನ್ನು ಪ್ರೀತಿಸಬೇಕು. ಜತೆಗೆ ಸಬ್ಜೇಕ್ಟ್ ಹಾಗೂ ವೃತ್ತಿಯನ್ನು ಸಹಾ ಪ್ರೀತಿಸಬೇಕು. ಇಷ್ಟಪಟ್ಟು ಬಂದಿರಬಹುದು ಅಥವಾ ಇಷ್ಟ ಪಡದೇ ಈ ವೃತ್ತಿಗೆ ಬಂದಿರಬಹುದು. ಆದರೆ, ಈ ಕ್ಷೇತ್ರಕ್ಕೆ ಬಂದ ಮೇಲೆ ಶಿಕ್ಷಕ ವೃತ್ತಿಯ ಮೇಲೆ ಗೌರವ ಹೊಂದಿ ವೃತ್ತಿಯ ಗೌರವ ಹೆಚ್ಚಿಸಬೇಕು ಎಂದು ಹೇಳಿದರು.

ಮೆದುಳಿನ ವಿಕಾಸ – ಒತ್ತಡ ನಿರ್ವಹಣೆಯ ವಿಷಯದ ಕುರಿತಂತೆ ಮಾತನಾಡಿದ ಬೆಂಗಳೂರಿನ ಸಮೀಪದ ಶಿವನಹಳ್ಳಿಯ ರಾಮಕೃಷ್ಣ ಮಿಷನ್ ಸ್ವಾಮಿ ಮಂಗಳನಾಥಾನಂದಜೀ ಮಹಾರಾಜ್ ಅವರು ಶಿಕ್ಷಕರು ಪರಿಣಾಮಕಾರಿಯಾಗಿ ಪಾಠ ಬೋಧನೆ ಮಾಡಬೇಕಾದರೆ ಸದೃಢ ಆರೋಗ್ಯವನ್ನು ಹೊಂದಿರಬೇಕು. ಅದಕ್ಕಾಗಿ ಒತ್ತಡರಹಿತವಾಗಿ ಕಾರ್ಯನಿರ್ವಹಿಸಬೇಕು. ಒತ್ತಡ ಹೇಗೆ ಉಂಟಾಗುತ್ತದೆ ಮತ್ತು ಶರೀರದ ಮೇಲೆ ಹೇಗೆ ಪರಿಣಾಮವನ್ನುಂಟು ಮಾಡುತ್ತದೆ. ಒತ್ತಡವನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಉದಾಹರಣೆಗಳ ಮೂಲಕ ಸವಿವರವಾಗಿ ತಿಳಿಸಿಕೊಟ್ಟರು.

ಸಂಪನ್ಮೂಲ ವ್ಯಕ್ತಿ ಸುರೇಶ ಕುಲಕರ್ಣಿ ಮಾತನಾಡಿ,
ನಾವು ಹುಟ್ಟುವ ಮೊದಲೇ ಸಾಕಷ್ಟು ಕೆಲಸವನ್ನು ರಾಮಕೃಷ್ಣ ಪರಮಹಂಸರು, ಶಾರದಾ ಮಾತೆ ಹಾಗೂ ಸ್ವಾಮಿ ವಿವೇಕಾನಂದರು ಮಾಡಿ ಹೋಗಿದ್ದಾರೆ. ಶಿಕ್ಷಕರು ನಿರಾಸಕ್ತಿಯಿಂದ ಸಾಂಪ್ರದಾಯಿಕ ಬೋಧನೆ ಮಾಡದೆ ಸೃಜನಶೀಲತೆಯಿಂದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಅರಳುವಂತೆ ಪಾಠ ಪ್ರವಚನ ಮಾಡಬೇಕು. ಆಕರ್ಷಕ ತಾವೇ ತಯಾರಿಸಿದ ಪಾಠೋಪಕರಣಗಳನ್ನು ಪ್ರದರ್ಶಿಸಿ ಶಿಕ್ಷಕರು ಹೇಗೆ ಪರಿಣಾಮಕಾರಿಯಾಗಿ ಬೋಧಿಸಬೇಕೆಂದು ತಿಳಿಸಿಕೊಟ್ಟರು.
ಕೇವಲ ಪರೀಕ್ಷಾ ದೃಷ್ಟಿಯಿಂದ ವಿದ್ಯಾಭ್ಯಾಸ ಮಾಡದೇ ಬದುಕನ್ನು ಕಟ್ಟಿಕೊಳ್ಳಲು ಅವಶ್ಯವಿರುವ ಎಲ್ಲಾ ಕೌಶಲಗಳನ್ನು ಗಳಿಸಿಕೊಳ್ಳಬೇಕೆಂದು ಸೃಜನಾತ್ಮಕವಾಗಿ ವಿವರಿಸಿದರು

ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜೀ ಮಹಾರಾಜ್ ಅವರು ಸ್ವಾಗತಿಸಿ , ಪ್ರಾಸ್ತಾವಿಕ ನುಡಿ ಆಡಿದರು. ಬೆಳಗಾವಿಯ ವಿವಿಧ ಕಾಲೇಜುಗಳಿಂದ 750 ಕ್ಕೂ ಹೆಚ್ಚು ಶಿಕ್ಷಕ – ಶಿಕ್ಷಕಿಯರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು.

ಕೊನೆಯ ದಿನವಾದ ಫೆ.5 ರ ರವಿವಾರ ಸಾರ್ವಜನಿಕರಿಗಾಗಿ ಆಧ್ಯಾತ್ಮಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ . ಸಂಜೆ ಪಂಡಿತ ಜಯತೀರ್ಥ ಮೇವುಂಡಿ ಅವರಿಂದ ಭಜನಾ ಸಂಧ್ಯಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ .


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

3 × 2 =