ನವ ಮಾಧ್ಯಮವನ್ನು ಅಳವಡಿಸಿಕೊಳ್ಳುವಲ್ಲಿ ಸ್ಥಳೀಯ ಮಾಧ್ಯಮಗಳು ಇಂದು ಬಹಳ ಪರಿಣಾಮಕಾರಿಯಾಗಿ ಜನರನ್ನು ಸೆಳೆಯುತ್ತಿವೆ : ರವಿ ಹೆಗಡೆ
ಯುವ ಭಾರತ ಸುದ್ದಿ ವಿಜಯಪುರ :
ಜನ ಇಂದು ಪತ್ರಿಕೆಗಳು ಬರುವ ಮೊದಲೇ ಫೇಸ್ ಬುಕ್ ಅಥವಾ ಇನ್ನುವುದೋ ಸ್ಥಳೀಯ ಮೀಡಿಯಾಗಳಲ್ಲಿ ಸುದ್ದಿ ಓದಿ ತಿಳಿದುಕೊಳ್ಳುತ್ತಾರೆ. ಅದರಲ್ಲೂ ನವ ಮಾಧ್ಯಮಗಳನ್ನು ಸ್ಥಳೀಯ ಮೀಡಿಯಾಗಳು ಬಹಳ ಪರಿಣಾಮಕಾರಿಯಾಗಿ ಜನರನ್ನು ಸೆಳೆದಿವೆ ಎಂದು ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ನಡೆದ 37ನೇ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದಲ್ಲಿ ನವ ಮಾಧ್ಯಮಗಳು ಮತ್ತು ಪತ್ರಕರ್ತರು ವಿಷಯವಾಗಿ ನಡೆದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ಇಂದು ಅಗಾಧವಾದ ಬದಲಾವಣೆಯಾಗಿದೆ. ನನಗೆ ಯಾವ ಸಮಯ ಇದೆ ಆವಾಗ ಸುದ್ದಿ ಓದುವೇ ಎಂಬಷ್ಟು ಜನ ಬದಲಾಗಿದ್ದಾರೆ. ನವ ಮಾಧ್ಯಮದ ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿ ಬೆಳೆದಿರುವುದರಿಂದ ಇಂತಹ ಪರಿವರ್ತನೆಯಾಗಿದೆ. ನಿಮ್ಮ ಪತ್ರಿಕೆ ಬಂದಿಲ್ಲವೋ ? ಇನ್ಯಾವುದೋ ಪತ್ರಿಕೆಯನ್ನು ಓದುವೆ ಎನ್ನುವಷ್ಟು ಜನರು ಬದಲಾವಣೆಯನ್ನು ತಂದುಕೊಂಡಿದ್ದಾರೆ ಎಂದು ಅವರು ಹೇಳಿದರು.
ದಿಗ್ಗಜರೊಬ್ಬರು ಪತ್ರಿಕೆಗಳು ಸಂಪೂರ್ಣ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂದು ಹೇಳಿದ್ದರು. ಈ ಮಾತು ಹೇಳಿ ದಶಕಗಳ ಉರುಳಿವೆ. ಆದರೆ, ಪತ್ರಿಕೆಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗುತ್ತಿವೆ. ಪತ್ರಿಕೆಯ ಡಿಜಿಟಲ್ ಪ್ರತಿ ಅಧಿಕವಾಗಿ ಓದುಗರನ್ನು ಆಕರ್ಷಿಸುತ್ತಿದೆ ಎಂದರು.
ಅಮೆರಿಕದಲ್ಲಿ ಮಾಧ್ಯಮ ಅಧ್ಯಯನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸಾಂಪ್ರದಾಯಿಕ ಮಾಧ್ಯಮಗಳ ಸೇವೆ ನಿರಂತರ ಎಂಬ ವಾದ ಮಂಡಿಸಿದ್ದೆ. ಆದರೆ, ಕೋವಿಡ್ ಪರಿಸ್ಥಿತಿಯಿಂದ ಸಾಂಪ್ರದಾಯಿಕ ಮಾಧ್ಯಮಗಳು ಎದುರಿಸಿದ ತೊಂದರೆ ಅಷ್ಟಿಷ್ಟಲ್ಲ. ಈ ಹೊಡೆತದಿಂದ ಪತ್ರಿಕೆಗಳ ಪ್ರಸರಣದ ಸಂಖ್ಯೆ ಶೇಕಡಾ 50ರಷ್ಟು ಇಳಿಕೆ ಕಂಡಿತು. ಲಾಕ್ ಡೌನ್ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಟಿ ಆರ್ ಪಿ ಗಗನಕ್ಕೇರಿದೆ. ಈಗ ಮತ್ತೆ ಕೆಳಕ್ಕೆ ಇಳಿದಿದೆ. ಸಾಂಪ್ರದಾಯಿಕ ಮಾಧ್ಯಮಗಳನ್ನು ಓದುವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಗೂಗಲ್ ನ್ಯೂಸ್, ಟ್ವಿಟರ್ ಮೊದಲಾದ ನವಮಾಧ್ಯಮಗಳೇ ಜಗತ್ತಿನ ದೊಡ್ಡ ಸುದ್ದಿ ಸಂಸ್ಥೆ ಆಗಿ ರೂಪುಗೊಂಡಿವೆ. ಪ್ರಪಂಚದ ದೊಡ್ಡ ವೃತ್ತಿಪರ ಸುದ್ದಿ ಸಂಸ್ಥೆಗಳನ್ನು ಮೀರಿಸುವ ಮಟ್ಟಕ್ಕೆ ಈ ನವ ಮಾಧ್ಯಮಗಳು ವಿಸ್ತಾರಗೊಂಡಿವೆ. ಸಾಂಪ್ರದಾಯಿಕ ಮಾಧ್ಯಮಗಳು ಹೇಳಿದ್ದನ್ನೇ ಹೇಳಿ ತೋರಿಸಿದ್ದನ್ನೆ ತೋರಿಸಿದ ಪರಿಣಾಮ ಜನತೆ ನವಮಾಧ್ಯಮಗಳ ಮರೆಹೋಗಿದ್ದಾರೆಯೇ ಹೊರತು ತಂತ್ರಜ್ಞಾನದಿಂದ ಅಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು.
ನಿಮ್ಮ ಪತ್ರಿಕೆ ಬರುವ ತನಕ ನಾನೇಕೆ ಕಾಯಲಿ, ಯಾವುದೋ ಮಾಧ್ಯಮ ಮೂಲಕ ನಾನು ತಿಳಿದುಕೊಳ್ಳುವೆ ಎಂಬ ಮನಸ್ಥಿತಿ ಓದುಗರಲ್ಲಿ ಅಧಿಕವಾಗುತ್ತಿದೆ. ಮೊಬೈಲ್ ನಲ್ಲಿ ಸಿನಿಮಾ ನೋಡುವುದು ರೂಢಿಯಾಗಿದೆ. ಆದ್ದರಿಂದ ಚಿತ್ರಮಂದಿರಗಳು ಭಣಗುಡುತ್ತಿವೆ. ಸಾಂಪ್ರದಾಯಿಕ ಮಾಧ್ಯಮಗಳು ವಿನಾಶದ ಅಂಚಿಗೆ ಹೋಗುತ್ತಿವೆ. ಇದು ಕೋವಿಡ್ ಸಂದರ್ಭದಲ್ಲಿ ಇನ್ನಷ್ಟು ತೀವ್ರವಾಯಿತು. ಆಗ ಕಡಿಮೆಯಾದ ಓದುಗರ ಸಂಖ್ಯೆ ಇನ್ನೂ ಹೆಚ್ಚಳವಾಗಿಲ್ಲ. ಹಾಗೆ ಟಿವಿ ಪ್ರೇಕ್ಷಕರ ಟಿಆರ್ ಪಿ ಸಹ ಕಡಿಮೆಯಾಗಿದೆ ಎಂದರು.
ಸಾಂಪ್ರದಾಯಿಕ ಮಾಧ್ಯಮಗಳಾದ ಪತ್ರಿಕೆಗಳ ಓದುಗರು ಮತ್ತು ಟಿವಿ ಮಾಧ್ಯಮಗಳ ವೀಕ್ಷಕರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವುದು ಕೇವಲ ನವಮಾಧ್ಯಮಗಳಿಂದ ಮಾತ್ರವಲ್ಲ. ಇವು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವುದು ಪ್ರಸಾರ ಮತ್ತು ವೀಕ್ಷಕರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದಕ್ಕೆ ಬಹು ಮುಖ್ಯ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ರವಿ ಹೆಗಡೆ ಅವರನ್ನು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸನ್ಮಾನಿಸಿದರು.