Breaking News

ದೇಹ ಬಲದ ಜೊತೆಗೆ ಆತ್ಮ ಮತ್ತು ಮನೋಬಲ ಬೆಳೆಸಿಕೊಳ್ಳಿ: ಡಿಸಿಪಿ ಪಿ.ವಿ. ಸ್ನೇಹಾ

Spread the love

ದೇಹ ಬಲದ ಜೊತೆಗೆ ಆತ್ಮ ಮತ್ತು ಮನೋಬಲ ಬೆಳೆಸಿಕೊಳ್ಳಿ: ಡಿಸಿಪಿ ಪಿ.ವಿ. ಸ್ನೇಹಾ

ಯುವ ಭಾರತ ಸುದ್ದಿ ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿತ್ತು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ವಿಜಯ ಎಫ್. ನಾಗಣ್ಣನವರ್ ದಲಿತ ಮಹಿಳೆ ಮತ್ತು ಸಾಹಿತ್ಯದ ಕುರಿತು ಮಾತನಾಡಿ, ದಲಿತ ಹೆಣ್ಣುಮಕ್ಕಳು ಮೂರು ಸಾವಿರ ವರ್ಷಗಳಿಂದ ತುಳಿತಕ್ಕೊಳಗಾಗಿದ್ದಾರೆ. ಇವರು ಎರಡು ರೀತಿಯ ಶೋಷಣೆಗಳನ್ನು ಅನುಭವಿಸುತ್ತಿದ್ದಾರೆ. ಒಂದು ಹೆಣ್ಣು ಎನ್ನುವ ಕಾರಣವಾದರೆ, ಇನ್ನೊಂದು ದಲಿತ ಎನ್ನುವುದಾಗಿದೆ. ದಲಿತ ಸಾಹಿತ್ಯದಲ್ಲಿ ನೋವು ತಲ್ಲಣಗಳು ಒಬ್ಬರ ಕಥೆಯಾಗಿರುವುದಿಲ್ಲ; ಅದು ಸಮುದಾಯದ ಕಥೆಯಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದಲಿತ ಮಹಿಳೆಯರ ಸ್ಥಿತಿಗತಿ ಒಂದೇ ಆಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಯತ್ನದಿಂದ ಇಂದು ಮಹಿಳೆಯರು ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆಯನ್ನು ಮಾಡುತ್ತಿದ್ದಾರೆ. ಮುಕ್ತ ಸಾಳ್ವೆ ಮೊದಲ ದಲಿತ ಬರಹಗಾರ್ತಿ. ಇವಳ ತರುವಾಯ ಇಂದು ಅನೇಕ ದಲಿತ ಮಹಿಳೆಯರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಾತಿ ಎನ್ನುವ ಮನೋವ್ಯಾಧಿ, ಶೋಷಣೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಮುಂದುವರಿದ ದೇಶವಾದ ಅಮೇರಿಕಾದಲ್ಲಿಯೂ ಕಾಣುತ್ತೇವೆ. ಇದರಿಂದ ಹೊರಬರಲು ನಮಗೆ ನಾವೇ ಪ್ರಯತ್ನಿಸಬೇಕು,ಸಂಘಟಕರಾಗಬೇಕು. ದಲಿತ ಎನ್ನುವುದು ದೇವರು ಕೊಟ್ಟಿದ್ದಲ್ಲ ಮನುಷ್ಯ ಕೊಟ್ಟಿದ್ದು ಎಂದರು.

ಬೆಳಗಾವಿಯ ಅಪರಾಧ ಮತ್ತು ಸಂಚಾರದ ಉಪ ಪೊಲೀಸ್ ಆಯುಕ್ತೆ ಪಿ. ವಿ. ಸ್ನೇಹಾ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಸ್ವಾವಲಂಬನೆ ಎನ್ನುವುದು ಹೊರಗಿನಿಂದಲೇ ಬರುವುದಲ್ಲ. ಅದು ಪ್ರತಿಯೊಬ್ಬ ಮಹಿಳೆಯ ಅಂತರಾಳದಿಂದ ಬರಬೇಕು. ಬಹುತೇಕ ಕುಟುಂಬದ ಹಣಕಾಸಿನ ವ್ಯವಹಾರವೆಲ್ಲ ಪುರುಷರೇ ನಿಭಾಯಿಸುತ್ತಾರೆ. ಮಹಿಳೆಗೆ ಸ್ವಾತಂತ್ರ್ಯ ಎಂಬುದು ಕೇವಲ ಓಡಾಟಕ್ಕೆ ಸೀಮಿತವಲ್ಲ, ಅವಳು ನಿರ್ವಹಿಸುವ ಎಲ್ಲಾ ಕೆಲಸ-ಕಾರ್ಯಗಳಲ್ಲಿರಬೇಕು. ಪ್ರತಿಯೊಂದು ವಿಷಯಗಳಲ್ಲಿ ಅವಳು ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವಂತಾಗಬೇಕು. ಇದಕ್ಕೆ ಅವಳು ದೇಹಬಲದ ಜೊತೆಗೆ ಆತ್ಮಬಲ, ಮನೋಬಲ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕೆಲಸವನ್ನೂ ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿ. ಆಗ ನೀವು ಎಲ್ಲರಿಗಿಂತಲೂ ವಿಭಿನ್ನವಾಗಿ ಬೆಳೆಯಬಲ್ಲಿರಿ. ವಿದ್ಯಾರ್ಥಿನಿಯರು ತಾವು ಏನು ಕಲಿತಿದ್ದೇವು ಎನ್ನುವುದಕ್ಕಿಂತ ಕಲಿತದರಲ್ಲಿ ಪಡೆದುಕೊಂಡದೆಷ್ಟು ಎಂಬುದರ ಕಡೆಗೆ ಗಮನ ಹರಿಸಬೇಕು. ನಿಮ್ಮ ಹುಟ್ಟು, ಜಾತಿ, ಲಿಂಗವನ್ನು ಮರೆಸುವಂತೆ ಸಮಾಜದಲ್ಲಿ ಬೆಳೆಯಬೇಕು. ಜಾತಿಗಿಂತಲೂ ನಾವು ಪಡೆದುಕೊಳ್ಳುವ ಸ್ಥಾನಮಾನಗಳನ್ನು ನೋಡಿ ಸಮಾಜ ಗೌರವಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಎಸ್. ತೇರದಾಳ ವಿದ್ಯಾರ್ಥಿಗಳು ತಮ್ಮ ಚಾರಿತ್ರ್ಯವನ್ನು ನಿರ್ಮಿಸಿಕೊಳ್ಳಬೇಕು. ತಮ್ಮ ಬೆಳವಣಿಗೆಗೆ ಬೇಕಾದ ಅಂಶಗಳನ್ನು ಪಡೆದುಕೊಂಡು ತಮ್ಮ ಬದುಕನ್ನು ಮಾದರಿಯಾಗಿಸಬೇಕು. ಆತ್ಮವಿಶ್ವಾಸ ಹೊಂದಿದ ಮಹಿಳೆ ಎಲ್ಲವನ್ನೂ ಮೀರಿ ಬೆಳೆಯಬಲ್ಲಳು ಎಂಬುದಕ್ಕೆ ಇಂದಿನ ಎಲ್ಲಾ ಕ್ಷೇತ್ರಗಳಲ್ಲಿನ ಅವಳ ಸಾಧನೆಯೇ ಸಾಕ್ಷಿ ಎಂದರು.

ಡಾ. ಮುಕುಂದ ಮುಂಡರಗಿ, ಡಾ. ಸುಮನ್ ಮುದ್ದಾಪುರ, ಉಪಸ್ಥಿತರಿದ್ದರು. ಉಪನ್ಯಾಸಕಿ ಅಶ್ವಿನಿ ಜವಳಿಮಠ ನಿರೂಪಿಸಿದರು. ಡಾ. ಶೋಭಾ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಮಧುಶ್ರೀ ಕಳ್ಳಿಮನಿ ಸ್ವಾಗತಿಸಿದರು. ಡಾ. ಮಂಜುಳಾ ಕೆ. ವಂದಿಸಿದರು. ವಿದ್ಯಾರ್ಥಿನಿ ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

nineteen − four =