ಬೆಳಗಾವಿ ಗ್ರಾಮೀಣದಲ್ಲಿ ಕಮಲ ಅರಳಿಸಿಯೇ ತೀರುವೆ-
ಮತ್ತೆ ರಣಕಹಳೆ ಮೊಳಗಿಸಿದ ರಮೇಶ ಜಾರಕಿಹೊಳಿ!
ಯುವ ಭಾರತ ಸುದ್ದಿ ಬೆಳಗಾವಿ : ಮೂರು ತಿಂಗಳ ಹಿಂದೆ ಹೀರೋಯಿನ್ ರೀತಿಯಲ್ಲಿ ಸ್ಟೈಲ್ ಮಾಡಿ ಮೈದಾನ ಖುಲ್ಲಾ ಹೈ ಅಂದ್ರು. ಯಾರು ಬೇಕಾದರೂ ಬರಬಹುದು( ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ) ಎಂದಿದ್ದರು. ಈಗ ನಾನು ಬಂದಿದ್ದೇನೆ. ನಾನು ಎಲ್ಲಾ ಹಂತದಲ್ಲೂ ಹೋಗಿ ಪಕ್ಷವನ್ನು ತರುವೆನು.
ಇದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರ ಸ್ಪಷ್ಟ ನುಡಿ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಗಳಾಗಲಿ. ಪಕ್ಷದ ವರಿಷ್ಠರ ಆದೇಶದ ಮೇರೆಗೆ ಅಭ್ಯರ್ಥಿ ಯಾರೇ ಇದ್ದರೂ ಅವರನ್ನು ಗೆಲ್ಲಿಸಿಯೇ ತೀರುವುದಾಗಿ ಸ್ಪಷ್ಟಪಡಿಸಿದರು.
ಸಚಿವ ಸಿ.ಸಿ.ಪಾಟೀಲ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಮೇಶ ಜಾರಕಿಹೊಳಿ ಅವರು, ಸಿ.ಸಿ.ಪಾಟೀಲ ಹೇಳಿಕೆ ಸಹಜ. ಯಾಕೆಂದರೆ ಸಂಜಯ ಪಾಟೀಲ ಎರಡು ಬಾರಿ ಶಾಸಕರಾದವರು. ಆದ್ದರಿಂದ ಅವರು ಸಹಜವಾಗಿಯೇ ಮಾತನಾಡಿದ್ದಾರೆ. ಸಿ.ಸಿ. ಪಾಟೀಲ ಅವರ ಜೊತೆ ನಾನು ಕಠೋರವಾಗಿ ಈ ಬಗ್ಗೆ ಮಾತನಾಡಿರುವೆ. ನೀವು ಯಾಕೆ ಆ ರೀತಿ ಮಾತನಾಡಿದಿರಿ ಎಂದು ಪ್ರಶ್ನಿಸಿದೆ. ಸಂಜಯ ಪಾಟೀಲ ಅವರಿಗೆ ಟಿಕೆಟ್ ನೀಡುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಜತೆಗೆ ಬೆಳಗಾವಿ ಗ್ರಾಮೀಣಕ್ಕೆ ಬಿಜೆಪಿಯಿಂದ ಬೇರೆ ಯಾರಿಗೂ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೋ ಅವರನ್ನು ನಾವು ಗೆಲ್ಲಿಸಲು ಶ್ರಮಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ನೂರಕ್ಕೆ ನೂರರಷ್ಟು ನಾವು ಈ ಬಾರಿ ಆ ರಾಕ್ಷಸನನ್ನು ಹೊಡೆದು ಹಾಕಲು ತೀರ್ಮಾನಿಸಿದ್ದೇವೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಮರ ಸಾರಿದ ಅವರು ತಮ್ಮನ್ನು ಸ್ವಯಂ ಘೋಷಿತ ಎಂದು ಕರೆದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿ ನಾನು ಸ್ವಯಂಘೋಷಿತನೆ ಅಥವಾ ಅವರು ಸ್ವಯಂಘೋಷಿತರೆ ಎಂದು ಪ್ರಶ್ನಿಸಿದರು. ಅವರೊಬ್ಬ ಮಹಿಳೆ. ನನ್ನ ಮೇಲೆ ಬಹಳ ಪ್ರಚೋದನಾತ್ಮಕವಾಗಿ ಮಾತನಾಡುತ್ತಾರೆ. ಆದರೆ ನಾವು ಆ ಬಗ್ಗೆ ಜಾಗರೂಕರಾಗಿರಬೇಕು.
ನಮ್ಮಲ್ಲಿ ರಾಜಕೀಯ ತಂತ್ರಗಳಿವೆ. ಈ ಬಾರಿ ನಾವು ವಿಧಾನಸಭಾ ಚುನಾವಣೆಯಲ್ಲಿ ಫೇಲ್ ಆಗುವುದಿಲ್ಲ. ಪರಿಷತ್ ಚುನಾವಣೆಯಲ್ಲಿ ಆದಂತೆ ಈ ಬಾರಿ ನಾವು ಯಾವುದೇ ಕಾರಣಕ್ಕೂ ಫೇಲ್ ಆಗುವುದಿಲ್ಲ ಎಂದು ಹೇಳಿದರು.
ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ವೈಯಕ್ತಿಕ ಭಿನ್ನಮತ ಮನೆಯಲ್ಲಿಡಬೇಕಾಗುತ್ತದೆ. ಪಕ್ಷದ ವಿಷಯ ಬಂದಾಗ ನಾವೆಲ್ಲ ಒಂದೇ ಆಗಿರುತ್ತೇವೆ. ಬಿಜೆಪಿ ಇದೀಗ ನನ್ನನ್ನು ಕಮಿಟಿಯಲ್ಲಿ ಸೇರಿಸಿದೆ. ಪಕ್ಷದ ವರಿಷ್ಠರು ಚುನಾವಣೆಯಲ್ಲಿ ಗೆಲ್ಲಲು ಆದೇಶ ಮಾಡಿದ್ದಾರೆ. ನಾವೆಲ್ಲ ಒಂದಾಗಿ ಚುನಾವಣೆ ಎದುರಿಸಲಿದ್ದೇವೆ. ಬೆಳಗಾವಿ ಗ್ರಾಮೀಣದಲ್ಲಿ ಅತಿ ಶೀಘ್ರದಲ್ಲೇ ಪಕ್ಷದ ವತಿಯಿಂದ ಸಮಾವೇಶ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.