Breaking News

ನಾಡಿನ ಸಾಂಸ್ಕೃತಿಕ ವಲಯಕ್ಕೆ ಸಂಸ್ಥಾನಗಳ ಕೊಡುಗೆ ಅನನ್ಯ : ಮಹಾಂತೇಶ ಕವಟಗಿಮಠ

Spread the love

ನಾಡಿನ ಸಾಂಸ್ಕೃತಿಕ ವಲಯಕ್ಕೆ ಸಂಸ್ಥಾನಗಳ ಕೊಡುಗೆ ಅನನ್ಯ : ಮಹಾಂತೇಶ ಕವಟಗಿಮಠ

ಯುವ ಭಾರತ ಸುದ್ದಿ ಬೆಳಗಾವಿ :
ಇತಿಹಾಸವನ್ನು ಬಲ್ಲವರು ಇತಿಹಾಸವನ್ನು ನಿರ್ಮಿಸಬಲ್ಲರು ಎಂಬ ನುಡಿಯನ್ನು ಇಂದಿನ ಯುವ ಜನಾಂಗ ಅರಿಯಬೇಕು. ನಮ್ಮ ನಾಡಿನ ಹಾಗೂ ದೇಶ ಕೆಲವು ಸಂಸ್ಥಾನಿಕರು ಸಾಂಸ್ಕೃತಿಕ ವಲಯಕ್ಕೆ ಭವ್ಯವಾದ ಕೊಡುಗೆಯನ್ನು ನೀಡುವ ಮೂಲಕ ಇಂದಿಗೂ ಅಮರರಾಗಿ ಉಳಿದಿದ್ದಾರೆ ಎಂದು ಕರ್ನಾಟಕ ಸರ್ಕಾರ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಲಿಂಗರಾಜ ಕಾಲೇಜಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜು ಇವರ ಸಹಯೋಗದಲ್ಲಿ ಜರುಗುತ್ತಿರುವ ‘ಬೆಳಗಾವಿ ಜಿಲ್ಲೆಯ ಸಂಸ್ಥಾನಗಳು’ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ನೂರಾರು ಸಂಸ್ಥಾನಗಳು ಆಳ್ವಿಕೆ ಮಾಡಿ ಹೋಗಿವೆ. ಅದರಲ್ಲಿ ಕೆಲವೇ ಕೆಲವು ಸಂಸ್ಥಾನಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗುವಂತೆ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಉಳಿಸಿಹೋಗಿವೆ. ಅದರಲ್ಲಿಯೂ ಬೆಳಗಾವಿ ಜಿಲ್ಲೆಯ ಸಿರಸಂಗಿ ಸಂಸ್ಥಾನ, ವಂಟಮುರಿ ಸಂಸ್ಥಾನ, ಕಿತ್ತೂರು ಸಂಸ್ಥಾನಗಳು, ಬೆಳವಡಿ ಸಂಸ್ಥಾನಗಳು, ಚಚಡಿ ದೇಸಾಯರು, ಕಿತ್ತೂರು ದೇಸಾಯಿ ಮನೆತನಗಳು ನೀಡಿರುವ ಕೊಡುಗೆ ಅನುಪಮ ಹಾಗೂ ಚಿರಸ್ಮರಣೀಯವಾಗಿವೆ. ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ಅವರೆಲ್ಲ ನೀಡಿರುವ ಸೇವೆ ದಾಖಲಾರ್ಹವೆನಿಸಿದೆ. ಕಿತ್ತೂರು ಚನ್ನಮ್ಮ ತನ್ನ ಬದುಕನ್ನೇ ಮುಡುಪಾಗಿಟ್ಟು ಬ್ರಿಟಿಷ್ ಸಾಮ್ರಾಜ್ಯ ಶಾಹಿ ವಿರುದ್ಧ ಹೋರಾಡಿದರೆ, ರಾಜಾ ಲಖಮಗೌಡರು, ಸಿರಸಂಗಿ ಲಿಂಗರಾಜ ಸಮಾಜಕ್ಕಾಗಿ ತಮ್ಮ ಸರ್ವಸ್ವವನ್ನೇ ಅರ್ಪಿಸಿದರು. ಮಕ್ಕಳಿಲ್ಲದ ಲಿಂಗರಾಜರು ಸಮಾಜದ ಮಕ್ಕಳನ್ನೇ ತಮ್ಮ ಮಕ್ಕಳೆಂದು ತಿಳಿದು ತಮ್ಮ ಸರ್ವಸ್ವವನ್ನೆಲ್ಲ ಧಾರೆ ಎರೆದಿದ್ದಾರೆ. ಅವರು ನಿರ್ಮಿಸಿದ ಶಿರಸಂಗಿ ನವಲಗುಂದ ಟ್ರಸ್ಟ್ ಲಕ್ಷಾಂತರ ಮಕ್ಕಳಿಗೆ ಶಿಷ್ಯವೇತನವನ್ನು ನೀಡಿ ಅವರ ಬದುಕಿಗೆ ಬೆಳಕಾಗಿದೆ. ಲಖಮಗೌಡರು ಬೆಳಗಾವಿ ಜಿಲ್ಲೆಯ ಹಲವಾರು ಶಿಕ್ಷಣ ಸಂಸ್ಥೆಗಳಿಗೆ, ಸಂಘಗಳಿಗೆ ನೀಡುವ ದಾನ ಊಹೆಗೂ ನಿಲುಕದ್ದು. ಅಂತೆಯೇ ಇವೆರಲ್ಲ ದಾನವೀರರೆಂಬ ಅಭಿದಾನಕ್ಕೆ ಪಾತ್ರರಾದರು. ಅವರ ಸಮಾಜಮುಖಿಯಾದ ಸೇವೆಗಳು ಅವರನ್ನು ಅಮರರನ್ನಾಗಿ ಮಾಡಿದೆ. ಕೊಲ್ಲಾಪುರ ಶಾಹು ಮಹಾರಾಜರು ದಮನಿತ ವರ್ಗದವರಿಗಾಗಿ ಶ್ರಮಿಸಿದರು. ಬರೋಡಾದ ಮಹಾರಾಜರು ಡಾ.ಅಂಬೇಡ್ಕರರ ಶಿಕ್ಷಣಕ್ಕೆ ಅಗಾಧ ನೆರವು ನೀಡಿದರು. ಹೀಗೆ ಭಾರತ ಹತ್ತು ಹಲವಾರು ಸಂಸ್ಥಾನಗಳು ತಮ್ಮ ಜನಪರವಾದ ಹಾಗೂ ಲೋಕಮಾನ್ಯವಾದ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಇಂದಿನ ಯುವಜನಾಂಗ ಇಂತಹ ಸಂಸ್ಥಾನಿಕರ ಚರಿತ್ರೆಗಳನ್ನ ಅಧ್ಯಯನ ಮಾಡುಬೇಕು ಸಂಶೋಧನೆಗೆ ತೊಡಗಬೇಕೆಂದು ಹೇಳಿದರು.

ರಾಣಿ ಚನ್ನಮ್ಮ ವಿವಿ ಪ್ರಭಾರ ಕುಲಪತಿ ಪ್ರೊ.ಎಚ್.ವೈ. ಕಾಂಬಳೆ ಮಾತನಾಡಿ, ‘ಶಿಕ್ಷಕರು ಹೆಚ್ಚು ಅಧ್ಯಯನ ನಿರತರಾಗಬೇಕಾಗಿದೆ. ನಾವು ಹೆಚ್ಚು ತಿಳಿದುಕೊಂಡರೆ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡಲು ಸಾಧ್ಯ. ಇಂದಿನ ಬಹುಶಿಕ್ಷಕರು ಅಧ್ಯಯನ ಅಧ್ಯಾಪನಗಳಿಂದ ದೂರ ಸರಿಯುತ್ತಿರುವುದು ಖೇದಕರ ಸಂಗತಿ. ನಮ್ಮನ್ನು ಹೊಸ ಶಿಸ್ತಿಯ ಅಧ್ಯಯನದೆಡೆಗೆ ತೊಡಗಿಸಿಕೊಳ್ಳುವುದರ ಮೂಲಕ ಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಧ್ಯಯನದ ಅಭಿರುಚಿಯನ್ನು ಹೆಚ್ಚಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎಸ್.ಎಂ.ಗಂಗಾಧರಯ್ಯ ಮಾತನಾಡಿ, ಬೆಳಗಾವಿ ಜಿಲ್ಲೆಯ ದೇಶಗತಿಗಳು ಹಾಗು ಸಂಸ್ಥಾನಗಳು ಕುರಿತು ಒಂದು ವೇದಿಕೆಯ ಮೂಲಕ ಚಿಂತನೆಗಳು ಜರುಗಬೇಕಾಗಿದ್ದು ಇಂದಿನ ಅಗತ್ಯವಾಗಿತ್ತು. ಒಂದೊಂದು ಸಂಸ್ಥಾನಗಳು ಜಿಲ್ಲೆಯಲ್ಲಿ ದಾಖಲಾರ್ಹವಾದ ಕೊಡುಗೆಯನ್ನು ನೀಡಿವೆ. ಅವುಗಳ ತಲಸ್ಪರ್ಶಿಯಾದ ಒಳನೋಟಗಳನ್ನು ಅನಾವರಣಗೊಳಿಸುವಲ್ಲಿ ಇದೊಂದು ಮುಕ್ತವಾದ ವಿಚಾರ ಸಂಕಿರಣವಾಗಲಿದೆ. ಇಂದಿನ ಯುವ ಸಂಶೋಧಕರಿಗೆ ಹತ್ತುಹಲವು ನೆಲೆಗಳಲ್ಲಿ ಮಾರ್ಗದರ್ಶಿಯಾಗಲಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಡಾ.ಎಚ್.ಎಂ.ಚನ್ನಪ್ಪಗೋಳ ವಂದಿಸಿದರು. ಡಾ.ರೇಣುಕಾ ಕಠಾರಿ ನಿರೂಪಿಸಿದರು.

ಸಾಹಿತಿ ಯ.ರು.ಪಾಟೀಲ, ಡಾ.ಬಾಳಣ್ಣಾ ಶೀಗಿಹಳ್ಳಿ, ಡಾ.ಮಹೇಶ ಗಾಜಪ್ಪನವರ ಉಪಸ್ಥಿತರಿದ್ದರು. ಡಾ.ಗಜಾನನ ನಾಯ್ಕ, ಪಿ.ನಾಗರಾಜ, ನೀಲಗಂಗಾ ಚರಂತಿಮಠ, ಡಾ.ಪಿ.ಜಿ.ಕೆಂಪಣ್ಣನವರ, ಡಾ.ಎಂ.ಎಸ್.ಉಕ್ಕಲಿ, ಡಾ.ಮಹೇಶ ಗುರನಗೌಡರ, ಡಾ.ರಾಮಕೃಷ್ಣ ಮರಾಠೆ, ಬಸವರಾಜ ಗಾರ್ಗಿ ಮೊದಲಾದವರು ಪಾಲ್ಗೊಂಡಿದ್ದರು. ರಾಜ್ಯದ ಹಲವಾರು ಕಾಲೇಜುಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪ್ರತಿನಿಧಿಗಳಾಗಿ ಆಗಮಿಸಿದ್ದ ಕೆ.ರಾಮರೆಡ್ಡಿ, ಡಾ.ಎ.ಬಿ. ವಗ್ಗರ, ಡಾ.ಗಜಾನಂದ ಸೊಲಗಣ್ಣನವರ, ಡಾ.ವೀರಭದ್ರಯ್ಯ ಹಿರೇಮಠ, ಡಾ.ಕೆ.ಆರ್.ಮೆಳವಂಕಿ, ಡಾ.ಗೀತಾಂಜಲಿ ಕುರುಡಗಿ, ಡಾ.ಆರ್.ಬಿ.ಕೊಕಟನೂರು, ಡಾ.ಎಂ.ಎಸ್.ಉಕ್ಕಲಿ, ಡಾ.ಮಹೇಶ ಅಂಗಡಿ, ಡಾ.ಸುರೇಶ ಹನಗಂಡಿ, ಮಹಾನಂದಾ ಗೊಂದಿ, ಮೀನಾಕ್ಷಿ ಅಶೋಕುಮಾರ, ಡಾ.ಆನಂದ ಜಕ್ಕಣ್ಣವರ, ಡಾ.ವಿಜಯಮಾಲಾ ನಾಗನೂರಿ ಪ್ರಬಂಧಗಳನ್ನು ಮಂಡಿಸಿದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

8 − 4 =